ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ಥಿತಿ ನೋಡಿ ಅಯ್ಯೋ ಎನಿಸುತ್ತಿದೆ. ಊಟ, ನಿದ್ದೆ, ಬಿಟ್ಟು ಚಿಂತೆಯಲ್ಲೇ ಮುಳುಗಿದ್ದಾರೆ. ಇದರಿಂದ ಹೊರಬರಲು ಅವರು ರಾಜೀನಾಮೆ ನೀಡುವುದು ಒಳಿತು... ಹೀಗೆಂದು ಸಲಹೆ ಮಾಡಿದವರು ಮಾಜಿ ಸಚಿವ ಬಸವರಾಜ ಹೊರಟ್ಟಿ.
ಅಧಿಕಾರ ಹಾಗೂ ಹಣದ ಆಸೆಗೆ ಅಂಟಿಕೊಂಡಿರುವ ಯಡಿಯೂರಪ್ಪನವರಿಗೆ ಎಷ್ಟೇ ಅವಮಾನವಾದರೂ ಅಧಿಕಾರದಿಂದ ಕೆಳಗಿಳಿಯಲು ಸಿದ್ಧರಿಲ್ಲದಿರುವುದು ನಾಚಿಕೆಗೇಡು. ಇದೀಗ ಮೊಕದ್ದಮೆಯ ಸುಳಿಯಲ್ಲಿ ಸಿಲುಕಿಕೊಂಡಿರುವ ಯಡಿಯೂರಪ್ಪ ಇನ್ನಾದರೂ ರಾಜೀನಾಮೆ ನೀಡಿ ಸುಖವಾಗಿರಲಿ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಿಲ್ಲ ಎಂದು ಕೇಂದ್ರದ ಬಿಜೆಪಿ ನಾಯಕರು ಹೇಳಿರುವುದನ್ನು ಗಮನಿಸಿದರೆ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತಾಗಿ ಮುಖ್ಯಮಂತ್ರಿಯಾಗುವ ಯೋಗ್ಯತೆ ಯಾರಿಗೂ ಇಲ್ಲವೆಂಬ ಸಂಗತಿ ಸ್ಪಷ್ಟವಾಗುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ ಎಂದು ಅಣಕವಾಡಿದರು.
ಕರ್ನಾಟಕ ಬಂದ್ ಸಂದರ್ಭದಲ್ಲಿ ಬಿಜೆಪಿ, ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದೆ. ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆಡಳಿತಾರೂಢ ಪಕ್ಷ ಬಂದ್‌ಗೆ ಕರೆ ನೀಡಿದೆ. ಬಿಜೆಪಿಗೆ ಅಧಿಕಾರ ಮಾಡಿ ಗೊತ್ತಿಲ್ಲ. ಈಗಲೂ ಅದು ವಿರೋಧ ಪಕ್ಷದಲ್ಲಿರುವಂತೆ ವರ್ತಿಸುತ್ತಿದೆ ಎಂದರು.