ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಾರದ್ವಾಜ್ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಲಿ: ಬಿಜೆಪಿ
(Hansraj Bharadwaj | Governor | Karnataka | Congress | Working President | BJP)
ಭಾರದ್ವಾಜ್ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಲಿ: ಬಿಜೆಪಿ
ಬೆಂಗಳೂರು, ಮಂಗಳವಾರ, 25 ಜನವರಿ 2011( 12:42 IST )
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೇ ಇಲ್ಲದಂತಾಗಿದೆ. ಹೀಗಾಗಿ ರಾಜ್ಯಪಾಲ ಹಂಸರಾಜ ಭಾರದ್ವಾಜರೇ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷ ಸಭೆಯ ಬಳಿಕ, ರಾಜಭವನದ ಎದುರು 'ರಾಜ್ಯಪಾಲರೇ ರಾಜ್ಯ ಬಿಟ್ಟು ತೊಲಗಿ' ಎಂಬ ಘೋಷಣೆಯೊಂದಿಗೆ ಧರಣಿ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ರಾಜ್ಯಪಾಲರನ್ನು, ಅವರ ಹಿಂದಿರುವ ಕಾಂಗ್ರೆಸ್ ಷಡ್ಯಂತ್ರಗಳನ್ನು ಕಟುವಾಗಿ ಟೀಕಿಸಿದರು.
ರಾಜ್ಯಪಾಲರರು ತೊಲಗುವವರೆಗೂ ಹೋರಾಟ, ರ‌್ಯಾಲಿ ರಾಜ್ಯದ ವಿವಿಧೆಡೆ ಬೃಹತ್ ರ‌್ಯಾಲಿಗಳನ್ನು ಸಂಘಟಿಸಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಹೋರಾಟ ನಡೆಸಲಾಗುತ್ತದೆ ಎಂದೂ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಶಾಸಕಾಂಗ ಪಕ್ಷದ ಸಭೆಯ ನಿರ್ಣಯಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ರಾಜ್ಯಪಾಲರು ರಾಜ್ಯದಿಂದ ತೊಲಗುವವರೆಗೂ ಈ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದರು.
ಕಾಂಗ್ರೆಸ್ ಪಕ್ಷವು ಜನಾದೇಶ ಪಡೆದು ಅಧಿಕಾರಕ್ಕೇರುವ ಮಾರ್ಗವೇ ಮರೆತು ಹೋಗಿದೆ. ಹೀಗಾಗಿ ಹಿಂಬಾಗಿಲಿನಿಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಲು ಷಡ್ಯಂತ್ರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.