ತಾತ್ಕಾಲಿಕ ಆಕರ್ಷಣೆಗೊಳಗಾಗಿ ಹಿಂದೂಗಳು ಬೇರೆ ಧರ್ಮಗಳಿಗೆ ಸೇರಿದರೆ ಅವರಿಗೆ ಹಿರಿಯರ ಶಾಪ ತಟ್ಟುವುದು ಖಚಿತ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಮಾರ್ನಮಿಬೈಲಿನ ದಲಿತರ ಕೇರಿಗೆ ಪಾದಯಾತ್ರೆ ಮಾಡಿ, ಅಲ್ಲಿನ ಸಮುದಾಯ ಭವನದಲ್ಲಿ ಮಾತನಾಡುತ್ತಿದ್ದ ಅವರು, ಹಿಂದೂಗಳು ಇತರ ಧರ್ಮಗಳಿಗೆ ವಲಸೆ ಹೋಗದಂತೆ ಸಲಹೆ ನೀಡಿದರು.
ನಮ್ಮ ಪರಂಪರೆ, ಸಂಸ್ಕೃತಿಯನ್ನು ನಾವು ಬಿಡಬಾರದು. ಹಿಂದೂ ಧರ್ಮವನ್ನು ಮರೆಯಬಾರದು. ಒಂದು ವೇಳೆ ಅನ್ಯ ಧರ್ಮಗಳತ್ತ ಹೋದರೆ ಗ್ರಾಮದೇವತೆಗಳು ಸೇರಿದಂತೆ ಹಿರಿಯರ ಮುನಿಸಿಗೆ ನಾವು ಗುರಿಯಾಗಬೇಕಾಗುತ್ತದೆ. ಅದು ಶಾಪವಾಗಿ ಪರಿಣಮಿಸುತ್ತದೆ ಎಂದರು.
ಯಾರನ್ನು ಕೂಡ ಕೀಳಾಗಿ ಕಾಣಬಾರದು. ಅಂತಹ ಅಧಿಕಾರ ಅಥವಾ ಹಕ್ಕು ಯಾರಿಗೂ ಇಲ್ಲ. ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಅವಮಾನ. ಈ ಬಗ್ಗೆ ದಲಿತರು ಸೇರಿದಂತೆ ಎಲ್ಲಾ ಹಿಂದೂಗಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಸಾರ್ವಜನಿಕರ ಜತೆಗೂ ಪೇಜಾವರ ಸ್ವಾಮೀಜಿಯವರು ಸಂವಾದ ನಡೆಸಿದರು. ಅವರ ಪ್ರಶ್ನೆಗಳಿಗೆ, ಸಂಶಯಗಳಿಗೆ ಉತ್ತರ ನೀಡುತ್ತಾ, ಗೋಮಾಂಸ ತಿನ್ನಬೇಡಿ, ಮದ್ಯಪಾನ ಬಿಡಿ ಎಂದು ಸಲಹೆ ಮಾಡಿದರು.
ಇಲ್ಲಿ ಏನಾದರೂ ಸಮಸ್ಯೆಗಳಿವೆಯೇ? ದೇವಸ್ಥಾನಗಳಲ್ಲಿ, ಹೊಟೇಲುಗಳಲ್ಲಿ, ಸಾರ್ವಜನಿಕ ಬಾವಿಗಳಲ್ಲಿ ಪ್ರವೇಶ ನಿರಾಕರಣೆ, ಬಳಕೆಗೆ ಬಹಿಷ್ಕಾರದಂತಹ ತೊಂದರೆಗಳು ಎದುರಾಗಿವೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ತುಟಿಪಿಟಿಕ್ಕೆನ್ನದ ಸಾರ್ವಜನಿಕರು, ತಮಗೊಂದು ಆರೆಸ್ಸೆಸ್ ಶಾಖೆ ಬೇಕು ಎಂದು ಬೇಡಿಕೆ ಮುಂದಿಟ್ಟರು.