ಹಂಸರಾಜ್ ಭಾರದ್ವಾಜ್ ಅವರು ಗೌರವಯುತ ರಾಜ್ಯಪಾಲ ಹುದ್ದೆಯಲ್ಲಿದ್ದು ರಾಜಕಾರಣ ಮಾಡುವುದು ಬೇಡ. ಅವರು ಕಾಂಗ್ರೆಸ್ ಅಥವಾ ಜೆಡಿಎಸ್ ಸೇರ್ಪಡೆಗೊಂಡು ರಾಜಕಾರಣ ಮಾಡಲಿ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಲಹೆ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿದ ನಂತರ ತಾಲೂಕಿನ ಅಮಚವಾಡಿಯಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಾ, ಗೌಪ್ಯತೆ ಕಾಪಾಡಬೇಕಿದ್ದ ರಾಜ್ಯಪಾಲರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯಪಾಲರಿಂದ ನಡುಬೀದಿ ನಾರಾಯಣ ವರ್ತನೆ ಹೊರ ಬರುತ್ತಿದೆ ಎಂದು ಟೀಕಿಸಿದರು.
ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ರಾಜ್ಯಪಾಲರು ಮಾಡುತ್ತಿರುವುದು ರಾಜಕಾರಣ. ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕಾರಣ ಮಾಡಲಿ. ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಸೇರಿಕೊಂಡು, ರಾಜಕಾರಣ ಮಾಡಿದರೆ ಆಗ ಯಾರಿಂದಲೂ ಆಕ್ಷೇಪಗಳು ಬರುವುದಿಲ್ಲ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಸವಾರಿಗೆ ಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ರೇಣುಕಾಚಾರ್ಯ, ಯಡಿಯೂರಪ್ಪ ಜನರಿಂದ ಆಯ್ಕೆಯಾಗಿ ಬಂದವರು. ಭಾರದ್ವಾಜ್ ಕೇಂದ್ರ ಸರಕಾರದಿಂದ ನೇಮಕಗೊಂಡವರು. ಜನತೆಯ ಪ್ರತಿನಿಧಿಯಾಗಿರುವ ಮುಖ್ಯಮಂತ್ರಿ ಬಗ್ಗೆ ಮಾತನಾಡುವ ಹಕ್ಕು ಭಾರದ್ವಾಜ್‌ಗೆ ಇಲ್ಲ ಎಂದರು.