ರಾಜ್ಯಪಾಲರ ಚಹಾಕೂಟಕ್ಕೆ ಸಿಎಂ ಗೈರು; ಸಂಪ್ರದಾಯ ಮುರಿದ ಯಡ್ಡಿ
ಬೆಂಗಳೂರು, ಗುರುವಾರ, 27 ಜನವರಿ 2011( 09:18 IST )
ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಗಣರಾಜ್ಯೋತ್ಸವದoದು ಮತ್ತೆ ಕಂಡು ಬಂದಿತ್ತು.
ಬೆಳಗ್ಗೆ ನಡೆದ ಧ್ವಜಾರೋಹಣ ಸಂದರ್ಭದಲ್ಲಿ ಶಿಷ್ಟಾಚಾರವೆಂಬಂತೆ ಕೈ ಕುಲುಕಿದ್ದ ಅವರಿಬ್ಬರೂ ಸಂಜೆಯ ಹೊತ್ತಿಗೆ ಮತ್ತೆ ಮುನಿಸಿಕೊಂಡರು. ರಾಜಭವನದಲ್ಲಿ ಏರ್ಪಡಿಸಲಾಗಿದ್ದ ಚಹಾಕೂಟದಲ್ಲಿ ಯಡಿಯೂರಪ್ಪ ಭಾಗವಹಿಸಬೇಕಾಗಿತ್ತು. ಆದರೆ ಸಿಎಂ ಗೈರು ಹಾಜರಿ ಆಗುವ ಮೂಲಕ ಸಂಪ್ರದಾಯ ಮುರಿದರು.
ಸಿಎಂ ನಡತೆ ಇದೀಗ ವಿವಾದಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ್ದ ರಾಜ್ಯಪಾಲರ ನಿರ್ಧಾರಕ್ಕೆ ತೀವ್ರ ಟೀಕಾಪ್ರಹಾರವನ್ನೇ ಮಾಡಿದ್ದ ಯಡಿಯೂರಪ್ಪ ಇದೀಗ ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ತೋರ್ಪಡಿಸಿದ್ದಾರೆ.
ಇದಕ್ಕೆ ಮತ್ತಷ್ಟು ಕಿಡಿ ಹೊತ್ತಿಸುವ ರೀತಿಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಯಾವೊಬ್ಬ ಶಾಸಕರಾಗಲಿ, ಸಚಿವರಾಗಲೀ ಭಾಗವಹಸದೇ ಇರುವುದು ಮತ್ತಷ್ಟು ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಆದರೆ ಮುಖ್ಯಮಂತ್ರಿಗಳು ಗೈರು ಹಾಜರಿ ಆಗುವ ಮೂಲಕ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಹಾಗೆಯೇ ಇಂತಹ ಸಂಪ್ರದಾಯವನ್ನು ತಪ್ಪಿಸಿದ ರಾಜ್ಯದ ಮೊದಲ ಸಿಎಂ ಎಂಬ ಅಪಕೀರ್ತಿಗೂ ಪಾತ್ರರಾಗಿದ್ದಾರೆ.
ಪ್ರತಿವರ್ಷ ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವವ ದಿನದಂದು ರಾಜ್ಯಪಾಲರು ಏರ್ಪಡಿಸುವ ಚಹಾಕೂಟದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ನ್ಯಾಯಾಧೀಶರು, ಯೋಧರು, ಉನ್ನತ ಅಧಿಕಾರಿಗಳು, ಮಾಧ್ಯಮ ವಿಭಾಗದವರು ಭಾಗವಹಿಸುವುದು ವಾಡಿಕೆ. ಆದರೆ ತನಗೆ ಅನ್ಯ ಕಾರ್ಯವಿದ್ದುದರಿಂದ ಗೈರು ಹಾಜರಾಗಿದ್ದೆ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ರಾಜ್ಯಪಾಲರು ನಿರಾಕರಿಸಿದರು. ಆದರೆ ಸಿಎಂ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.