ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಸದಸ್ಯರು ನಗರದ ಕೆಂಪೇಗೌಡ ಬಸ್ ನಿಲ್ದಾಣ ಸಮೀಪ ಇಪ್ಪತ್ತೈದು ಪೈಸೆಗೆ ಸೊಪ್ಪಿನ ಕಂತೆ ಮಾರಾಟ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ದಿನಬಳಕೆ ವಸ್ತುಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಇದರಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿವೆ ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.
ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ಸರಕಾರ ಬಡ ರೈತರ ಕೃಷಿ ಭೂಮಿಯನ್ನೇ ಕಸಿದುಕೊಂಡು, ಅವರನ್ನು ಬೀದಿಪಾಲು ಮಾಡಿದೆ. ಆದರೆ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಮಣ್ಣಿನ ಮಕ್ಕಳನ್ನು ಅಭಿವೃದ್ಧಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿರುವುದಾಗಿ ದೂರಿದರು. ಮತ್ತೊಂದೆಡೆ ಆಹಾರ ಉತ್ಪನ್ನ ಕುಂಠಿತವಾಗಿದೆ. ಅದರಿಂದಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿ ಅಭಾವ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಕಾಳಸಂತೆಯಲ್ಲಿ ಪಡಿತರ ಮಾರಾಟ ತಪ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.