ತಿರಂಗಾ ಯಾತ್ರೆ ಹೆಸರಿನಲ್ಲಿ ಬಿಜೆಪಿ ರಾಷ್ಟ್ರವನ್ನು ವಿಭಜನೆ ಮಾಡಲು ಹೊರಟಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಟುವಾಗಿ ಟೀಕಿಸಿದ್ದಾರೆ.
ರಾಷ್ಟ್ರೀಯ ಪಕ್ಷವಾದ ಬಿಜೆಪಿ ಈ ಸಂದರ್ಭದಲ್ಲಿ ಈ ತಿರಂಗಾ ವಿಚಾರವನ್ನು ಎತ್ತುವ ಮೂಲಕ ದೇಶವನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಈ ವಿಚಾರವನ್ನು ಈಗ ಎತ್ತಿರುವುದಾದರೂ ಏಕೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮುಸ್ಲಿಮರನ್ನು ದ್ವಿತೀಯ ದರ್ಜೆ ನಾಯಕರನ್ನಾಗಿ ಬಿಜೆಪಿ ನೋಡುತ್ತಿದೆ ಎಂದು ದೂರಿದರು. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಬಗ್ಗೆ ಅವರ ಗಮನ ಸೆಳೆದಾಗ, ಈಗಾಗಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ. ಮತ್ತೊಮ್ಮೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದರು.
ಕೇರಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಸಲುವಾಗಿ ತಾವು ಜ.28ರಿಂದ 31ರವರೆಗೆ ಪ್ರವಾಸ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಹೇಳಿದರು.