ಪ್ರತಿಪಕ್ಷಗಳ ಕಾಟದಿಂದ ರಕ್ಷಣೆ ಪಡೆಯಲು ಹಾಗೂ ಸರಕಾರದ ಸುಭದ್ರತೆಯ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಯಜ್ಞದ ಮೊರೆ ಹೋಗಿದ್ದಾರೆ.
ನಗರದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಶ್ರೀರಾಮ ಸೇವಾ ಮಂಡಳಿ ವತಿಯಿಂದ ಆಯೋಜಿಸಿದ್ದ ತ್ರಯೋ ದಶ ಕೋಟಿ ಶ್ರೀರಾಮ ತಾರಕ ಯಜ್ಞದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ಈಗಾಗಲೇ ಹಲವು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಹಾಗಾಗಿ ಸಂಕಷ್ಟ ಎದುರಿಸಲು, ಶಾಂತಿಗಾಗಿ ಈಗ ಯಜ್ಞ ಮಾಡಿಸುತ್ತಿರುವುದಾಗಿ ಯಜ್ಞದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ನಾನು ಈಗಾಗಲೇ ಹಲವು ತಪ್ಪುಗಳನ್ನು ಮಾಡಿದ್ದೇನೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಇನ್ನು ಮುಂದೆ ಯಾವುದೇ ತಪ್ಪನ್ನು ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯಗಳನ್ನು ಮಾಡುವುದರ ಜೊತೆಗೆ ಜನತೆಯ ಆಶೋತ್ತರಗಳಿಗೆ ಚ್ಯುತಿ ಬಾರದಂತೆ ಉತ್ತಮ ಆಡಳಿತ ನಡೆಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗಿನ ರಾಜಕೀಯ ಜಂಜಾಟದಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಘಾಸಿಗೊಂಡಿದ್ದೇನೆ. ಮನಶಾಂತಿಗಾಗಿ ದೇವಾಲಯಗಳಿಗೆ ಭೇಟಿ ನೀಡಲು ಹಲವು ಬಾರಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಇಂದು ಸ್ವಲ್ಪ ಬಿಡುವು ಮಾಡಿಕೊಂಡು ಯಜ್ಞದಲ್ಲಿ ಪಾಲ್ಗೊಂಡಿದ್ದೇನೆ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಸಿಕ್ಕಿದೆ ಎಂದರು.
ಹಿಂದೆ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ಮಾಡುವುದರ ಮೂಲಕ ಲೋಕಕಲ್ಯಾಣಕ್ಕೆ ಒಳ್ಳೆಯದಾಗಲೀ ಎಂದು ಹರಸುತ್ತಿದ್ದರು. ಅದೇ ರೀತಿ ಇಂದು ಸಹ ಯಜ್ಞ-ಯಾಗಾದಿಗಳನ್ನು ನಡೆಸುವುದರೊಂದಿಗೆ ಜನತೆಗೆ ಶಾಂತಿ, ನೆಮ್ಮದಿ, ಸಮೃದ್ದಿಯ ಬದುಕು ಸಿಗಲೆಂದು ಹಾರೈಸಲಾಗುವುದು ಎಂದು ಹೇಳಿದರು.