ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಜನ ಸಾಹಿತಿಗಳು, ಕಲಾವಿದರು, ಗಣ್ಯರು ಇದ್ದಾರೆ. ಹಾಗಂತ ಎಲ್ಲರನ್ನೂ ಉತ್ಸವ ಸಮಿತಿ ಸದಸ್ಯರನ್ನಾಗಿಸಲು ಆಗದು. ಆಯ್ದ ಕೆಲವರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಿತಿ ರಚನೆಯಲ್ಲಿ ಆಗಿರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ ಅವರು ಸಮ್ಮೇಳನ ಯಶಸ್ಸಿಗೆ ಎಲ್ಲ ಇಲಾಖೆಗಳ ಸಹಕಾರ ಪಡೆಯಲಾಗುತ್ತಿದೆ. ಸಮ್ಮೇಳನಕ್ಕಾಗಿ ಸರಕಾರ 30 ಕೋಟಿ ರೂ.ಗಳ ಅನುದಾನ ನೀಡುತ್ತಿದೆ. ಉಳಿದ ಇಲಾಖೆಗಳಿಗೆ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಗೆ ರಸ್ತೆ ಕಾಮಗಾರಿ, ಸಮಾಜ ಕಲ್ಯಾಣ ಇಲಾಖೆಗೆ ವಸತಿ ನಿಲಯಗಳನ್ನು ಅಚ್ಚುಕಟ್ಟಾಗಿ ಇಡಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾನಾ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನ ಯಶಸ್ಸಿನ ಬಗೆಗೆ ಯಾವುದೇ ಆತಂಕ ಬೇಡ ಎಂದು ಅವರು ಹೇಳಿದರು.