ರಾಜಕೀಯದಲ್ಲಿ ಎಲ್ಲರಿಗೂ ವಿರೋಧಿಗಳಿರುತ್ತಾರೆ: ರವೀಂದ್ರನಾಥ್
ದಾವಣಗೆರೆ, ಗುರುವಾರ, 27 ಜನವರಿ 2011( 19:04 IST )
ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲವಾಗುವ ಉದ್ದೇಶದಿಂದ ಬೆಳಗಾವಿಯಲ್ಲಿ ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರ ಹಾಗೂ ಮಂಡ್ಯದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಕೇಂದ್ರ ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ ಎಂದು ಸಕ್ಕರೆ ಮತ್ತು ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂಶೋಧನಾ ಕೇಂದ್ರಗಳ ಸ್ಥಾಪನೆಗೆ ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಒಟ್ಟು 57 ಸಕ್ಕರೆ ಕಾರ್ಖಾನೆಗಳಿದ್ದು, 2010-11ನೇ ಸಾಲಿನಲ್ಲಿ 300 ಲಕ್ಷ ಟನ್‌ಗಿಂತ ಅಧಿಕ ಕಬ್ಬು ಅರೆಯಲಾಗಿದೆ. ಪ್ರಥಮ ಬಾರಿಗೆ 32 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ ದಾಖಲೆ ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಹಿಂದಿನ ಯಾವ ಮುಖ್ಯಮಂತ್ರಿಯೂ ಮಾಡದ ತಪ್ಪನ್ನು ಬಿ.ಎಸ್. ಯಡಿಯೂರಪ್ಪ ಅವರು ಮಾಡಿಲ್ಲ. ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಮಜಾಯಿಷಿ ನೀಡಿದರು.
ರಾಜಕೀಯ ವಿರೋಧಿಗಳು ದೂರು ದಾಖಲಿಸಿದ ಕೂಡಲೇ ಮುಖ್ಯಮಂತ್ರಿ ತಪ್ಪಿತಸ್ಥರಾಗುವುದಿಲ್ಲ. ಪ್ರತಿಪಕ್ಷಗಳು ಮುಖ್ಯಮಂತ್ರಿಗಳ ಘನತೆ, ಗೌರವ ಹಾಳು ಮಾಡುವ ಕೆಲಸಕ್ಕೆ ಇಳಿದಿದ್ದಾರೆ. ರಾಜಕೀಯದಲ್ಲಿ ಎಲ್ಲರಿಗೂ ವಿರೋಧಿಗಳಿರುತ್ತಾರೆ. ಎಸ್.ಎಂ. ಕೃಷ್ಣ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ಇಂಥ ಅನೇಕ ತಪ್ಪುಗಳಾಗಿವೆ. ಜನ ಸಾಮಾನ್ಯರಿಗೆ ಒಳ್ಳೆಯ ಕೆಲಸ ಮಾಡುವಾಗ ಸಣ್ಣಪುಟ್ಟ ತಪ್ಪು ಆಗುವುದು ಸಹಜ ಎಂದು ಸಮರ್ಥಿಸಿಕೊಂಡರು.