ಭ್ರಷ್ಟಾಚಾರ ಹಾಗೂ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂದು ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಡಕ್ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದು ಇಂತಹದೊಂದು ಸವಾಲು ಎಸಗಿದ್ದಾರೆ. ಯಡಿಯೂರಪ್ಪ ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಪುತ್ರ ರಾಘವೇಂದ್ರ ಅವರಿಗೆ ಬೆಂಗಳೂರಿನಲ್ಲಿ ಮನೆ ಮತ್ತು ನಿವೇಶನ ಇದ್ದರೂ ಇಲ್ಲ ಎಂದು ಹೇಳಿ ರೈತರ ಜಮೀನು ಡಿನೋಟಿಫೈ ಮಾಡಿಲ್ಲವೆ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧದ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿಬೇಕು ಎಂದವರು ಮತ್ತೆ ಒತ್ತಾಯಿಸಿದರು. ಅಲ್ಲದೆ ಭ್ರಷ್ಟ ಸಿಎಂ ರಾಜೀನಾಮೆ ಒತ್ತಾಯಿಸಿ ಜನವರಿ 30ರಂದು ಬೆಂಗಳೂರಿನಲ್ಲಿ ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಪ್ರತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿಯೂ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.