ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚರ್ಚ್ ದಾಳಿ ವರದಿ ಸಲ್ಲಿಕೆ; ನಿಜವಾದ ಹಿಂದೂಗಳ ಪಾತ್ರವಿಲ್ಲ (Chruch attack | Hindu | Commission | Police | BJP)
Bookmark and Share Feedback Print
 
PTI
ರಾಜ್ಯಾದ್ಯಂತ ತೀವ್ರ ವಿವಾದ, ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದ ಚರ್ಚ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಬಿ.ಕೆ.ಸೋಮಶೇಖರ್ ನೇತೃತ್ವದ ತನಿಖಾ ಆಯೋಗ ಅಂತಿಮ ವರದಿಯನ್ನು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಿದೆ.

2008-2009 ರಲ್ಲಿ ರಾಜ್ಯದ ವಿವಿಧೆಡೆ ನಡೆದ ಚರ್ಚ್ ದಾಳಿ ಪ್ರಕರಣದಲ್ಲಿ ಆಯೋಗ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಕ್ಲೀನ್ ಚಿಟ್ ನೀಡಿದ್ದು, ದಾಳಿಯಲ್ಲಿ ಸರಕಾರವಾಗಲಿ, ಸಂಘ ಪರಿವಾರ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಶಾಮೀಲಾದ ಬಗ್ಗೆ ಯಾವುದೇ ಪುರಾವೆಗಳು ಇಲ್ಲ ಎಂಬುದಾಗಿ ತಿಳಿಸಿದೆ. ಎಲ್ಲಾ ದಾಳಿಗಳು ಉದ್ದೇಶಪೂರ್ವಕವಾಗಿ ನಡೆದಿಲ್ಲ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ಕೋಲಾರ, ಉಡುಪಿ, ಮಂಗಳೂರು, ದಾವಣಗೆರೆ ಜಿಲ್ಲೆಗಳಲ್ಲಿನ ಚರ್ಚ್ ಮೇಲೆ ನಡೆದ ದಾಳಿಯ ಹಿಂದೆ ಕ್ರಿಶ್ಚಿಯನ್ ವಿರೋಧಿ ಮೂಲಭೂತವಾದಿಗಳ ಕೈವಾಡ ಇರುವುದಾಗಿ ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.

ಆದರೆ ಚರ್ಚ್ ದಾಳಿ ಘಟನೆ ಕುರಿತಂತೆ ಭಜರಂಗದಳದ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದೆಂಬ ಮನವಿ ಸಮರ್ಥನೀಯ ಎಂಬುದನ್ನು ವರದಿ ತಿಳಿಸಿದ್ದು, ಆ ಸಂದರ್ಭದಲ್ಲಿ ದಾಳಿಯನ್ನು ನಿಯಂತ್ರಿಸಿದ ಪೊಲೀಸರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ವಿವರಿಸಿದೆ. ಅಷ್ಟೇ ಅಲ್ಲ ರಾಜ್ಯದ ಹಲವೆಡೆ ಮತಾಂತರ ನಡೆಯುತ್ತಿದೆ. ಆಮಿಷವೊಡ್ಡಿ ಮತಾಂತರ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕಾನೂನಿನ ನಿಯಂತ್ರಣ ಬೇಕು ಎಂದು ಆಯೋಗ ಸರಕಾರಕ್ಕೆ ಸಲಹೆ ನೀಡಿದೆ.

ರಾಜ್ಯದಲ್ಲಿ ನಡೆದ ಚರ್ಚ್ ದಾಳಿಯನ್ನು ವಿವಿಧ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಂಡಿರುವುದಾಗಿಯೂ ಆಯೋಗ ಆರೋಪಿಸಿದೆ. ಚರ್ಚ್ ಮೇಲೆ ದಾಳಿ ನಡೆಸಿದರೆ ತಮಗೆ ರಕ್ಷಣೆ ಸಿಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಈ ದುಷ್ಕೃತ್ಯ ನಡೆಸಲಾಗಿದೆ ಎಂದು ಆಯೋಗ ವರದಿಯಲ್ಲಿ ಹೇಳಿದೆ.

ರಾಜ್ಯದ ವಿವಿಧೆಡೆ ದಾಳಿ ನಡೆದಿರುವುದು ಸತ್ಯ ಎಂದಿರುವ ಆಯೋಗ, ದಾಳಿಯಲ್ಲಿ ನಿಜವಾದ ಹಿಂದೂಗಳ ಪಾತ್ರವಿಲ್ಲ. ಅದಕ್ಕೆ ಯಾವುದೇ ಪುರಾವೆಯೂ ಇಲ್ಲ ಎಂಬುದಾಗಿ ವರದಿ ಸಲ್ಲಿಕೆ ನಂತರ ಆಯೋಗದ ಅಧ್ಯಕ್ಷ ನ್ಯಾ.ಬಿ.ಕೆ.ಸೋಮಶೇಖರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

2008-09ರಲ್ಲಿ ನಡೆದ ಚರ್ಚ್ ದಾಳಿ ಬಗ್ಗೆ 300ಕ್ಕೂ ಹೆಚ್ಚು ದಿನ 1500 ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ಸುಮಾರು 800 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಆದರೂ ಈ ವರದಿ ತಯಾರಿಕೆ ಅತ್ಯಂತ ಕ್ಲಿಷ್ಟಕರವಾಗಿತ್ತು ಎಂದು ನ್ಯಾ.ಸೋಮಶೇಖರ್ ಹೇಳಿದ್ದಾರೆ.

ಏತನ್ಮಧ್ಯೆ ಚರ್ಚ್ ದಾಳಿ ಕುರಿತಂತೆ ಆಯೋಗ ಮಧ್ಯಂತರ ವರದಿ ಸಲ್ಲಿಸಿದ ವೇಳೆ, ಹಿಂದೂಪರ ಸಂಘಟನೆಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು. ಆದರೆ ಅಂತಿಮ ವರದಿಯಲ್ಲಿ ಸಂಘ ಪರಿವಾರಕ್ಕೆ ಕ್ಲೀನ್ ಚಿಟ್ ನೀಡುವ ಮೂಲಕ ಆಯೋಗ ಸರಕಾರವೇ ಬರೆಸಿಕೊಟ್ಟ ವರದಿಯನ್ನು ನೀಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನೊಬ್ಬನನ್ನೇ ಯಾಕೆ ಟಾರ್ಗೆಟ್ ಮಾಡಿದ್ದು; ಮಹೇಂದ್ರ ಕುಮಾರ್
ಚರ್ಚ್ ದಾಳಿ ಪ್ರಕರಣದಲ್ಲಿ ನನ್ನನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಲಾಗಿದೆಯೋ ಗೊತ್ತಿಲ್ಲ. ನ್ಯಾ.ಬಿ.ಕೆ.ಸೋಮಶೇಖರ್ ಯಾವ ಮನಸ್ಥಿತಿಯಲ್ಲಿ ವರದಿ ಸಿದ್ದಪಡಿಸಿದ್ದಾರೆಂಬುದು ತಿಳಿಯುತ್ತಿಲ್ಲ ಎಂದು ಭಜರಂಗದಳದ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಚರ್ಚ್ ದಾಳಿಯಲ್ಲಿ ಮಹೇಂದ್ರ ಕುಮಾರ್ ಅವರ ಮೇಲೆ ಕ್ರಮ ಕೈಗೊಳ್ಳಬಹುದೆಂಬ ಮನವಿ ಸಮರ್ಥನೀಯ ಎಂದು ಆಯೋಗ ವರದಿಯಲ್ಲಿ ಉಲ್ಲೇಖಿಸಿದ್ದಕ್ಕೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಅತಿಯಾದ ಮತಾಂತರದ ವಿರುದ್ಧ ನಾನು ಸಂಘಟನೆ ಮೂಲಕ ವಿರೋಧಿಸಿ ಹೋರಾಡಿದ್ದೆ. ಹಾಗಾಗಿ ಮಹೇಂದ್ರ ಕುಮಾರ್ ಒಬ್ಬ ವ್ಯಕ್ತಿಯಲ್ಲ. ಅಂದು ನಾನು ಭಜರಂಗದಳದ ಸಂಚಾಲಕನಾಗಿದ್ದೇನೆ. ಆದರೆ ಘಟನೆಗೆ ನಾನೊಬ್ಬನೇ ಕಾರಣ ಎಂದು ಗುರಿ ಮಾಡಿರುವ ಹಿಂದೆ ಷಡ್ಯಂತ್ರ ಇದೆ. ಈ ಬಗ್ಗೆ ವರದಿಯನ್ನು ಪರಿಶೀಲಿಸಿ ತನ್ನ ಪ್ರತಿಕ್ರಿಯೆ ನೀಡುವುದಾಗಿ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಸುಳ್ಳು ವರದಿಗೆ ಯಾವುದೇ ಬೆಲೆ ಇಲ್;ಕುಮಾರಸ್ವಾಮಿ
ಚರ್ಚ್ ದಾಳಿ ಬಗ್ಗೆ ನ್ಯಾ.ಬಿ.ಕೆ.ಸೋಮಶೇಖರ್ ನೇತೃತ್ವದ ತನಿಖಾ ಆಯೋಗ ಸುಳ್ಳು ವರದಿಯನ್ನು ನೀಡಿದ್ದು, ಈ ವರದಿಯನ್ನು ಸರಕಾರ ಒಪ್ಪಿಕೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಕೊಲ್ಲೂರು ಮುಕಾಂಬಿಕಾ ಕ್ಷೇತ್ರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ಸೋಮಶೇಖರ್ ವರದಿ ನಿರೀಕ್ಷಿತ. ನ್ಯಾಯಾಂಗ ತನಿಖೆ ಉದ್ದೇಶವೇ ತಪ್ಪು ಮುಚ್ಚಿಕೊಳ್ಳುವುದಾಗಿದೆ. ಸೋಮಶೇಖರ್ ಅವರಿಂದ ವರದಿ ತರಿಸಿಕೊಂಡು ತಿದ್ದುಪಡಿ ಮಾಡಿರುವುದಾಗಿ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಈ ರೀತಿ ಸುಳ್ಳು ವರದಿಯನ್ನು ಆಯೋಗದ ಮೂಲಕ ಹೊರಹಾಕಿದ್ದಾರೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ