ದೇಹ ಸುಖ ಬೇಕೆಂದ ಕಾಮುಕ ಗ್ರಾಮ ಲೆಕ್ಕಿಗನಿಗೆ ಚಪ್ಪಲಿ ಸೇವೆ!
ಮಂಗಳೂರು, ಶುಕ್ರವಾರ, 28 ಜನವರಿ 2011( 12:24 IST )
ತಾಲೂಕು ಪಂಚಾಯಿತಿ, ಗ್ರಾಮ, ಜಿಲ್ಲಾ ಹೀಗೆ ಯಾವುದೇ ಸರಕಾರಿ ಕಚೇರಿಗಳಲ್ಲಿ ಕೆಲಸವಾಗಬೇಕಿದ್ದರೆ ಲಂಚ ಕೇಳುವುದು ಮಾಮೂಲಿ, ಆದರೆ ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಬೇಕಾದ್ರೆ ದೇಹ ಸುಖ ಕೊಡಬೇಕೆಂದು ಕೇಳಿದ ಗ್ರಾಮ ಲೆಕ್ಕಿಗನೊಬ್ಬನಿಗೆ ಸಾರ್ವಜನಿಕರು ಚಪ್ಪಲಿ ಸೇವೆ ಮಾಡಿದ ಘಟನೆ ಕಾವೂರಿನಲ್ಲಿ ನಡೆದಿದೆ.
ಘಟನೆ ವಿವರ; ಇಲ್ಲಿನ ಕಾವ್ಯ ಎಂಬ ದಲಿತ ಮಹಿಳೆಯೊಬ್ಬರು ಆಶ್ರಯ ಯೋಜನೆಯಲ್ಲಿ ನಿವೇಶನ ಪಡೆದುಕೊಳ್ಳಲು ಜಾತಿ ಪ್ರಮಾಣ ಪತ್ರ ಬೇಕೆಂದು ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ ಅರ್ಜಿಯನ್ನು ಅಧಿಕಾರಿಗಳು ಕಾವೂರು ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಎಂಬಾತನಿಗೆ ಕಳುಹಿಸಿದ್ದರು.
ಈ ಮಾಹಿತಿ ತಿಳಿದು ಕಾವ್ಯ ಕಾವೂರು ಗ್ರಾಮ ಪಂಚಾಯಿತಿಗೆ ಬಂದಾಗ, ಶಿವಾನಂದ ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಬೇಕಿದ್ದರೆ ಒಂದು ಬಾರಿ ದೈಹಿಕ ಸುಖ ನೀಡಬೇಕೆಂದು ನೇರವಾಗಿಯೇ ಕೇಳಿಬಿಟ್ಟಿದ್ದ!. ಆ ಸಂದರ್ಭದಲ್ಲಿ ಆಕೆ ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಬೇಕಿದ್ದರೆ ದೇಹ ಸುಖ ನೀಡಬೇಕೆಂದು ಕೇಳುವುದು ಸರಿಯಲ್ಲ ಎಂದು ಹೇಳಿ ಗಲಾಟೆ ಕೂಡ ಮಾಡಿದ್ದರು. ನಂತರ ಆತ ಆಕೆಯ ಮೊಬೈಲ್ ನಂಬರ್ ತೆಗೆದುಕೊಂಡು ನಾಲ್ಕೈದು ಬಾರಿ ಕರೆ ಮಾಡಿ ಒತ್ತಾಯಿಸಿದ್ದನಂತೆ.
ಅಂತೂ ಕಾಮುಕ ಗ್ರಾಮ ಲೆಕ್ಕಿಗನ ಚಪಲ ಕಾವ್ಯಳ ಗಂಡನಿಗೆ ತಿಳಿಯಿತು. ಕೂಡಲೇ ದಲಿತ ಮುಖಂಡ ಆನಂದ್ ಅವರೊಡನೆ ಚರ್ಚಿಸಿ ಒಂದು ಯೋಜನೆ ರೂಪಿಸಿದರು. ಅದರಂತೆ ಕಾವ್ಯ ಗ್ರಾಮ ಲೆಕ್ಕಿಗ ಶಿವಾನಂದನಿಗೆ ಕರೆ ಮಾಡಿ ಮನೆಗೆ ಬರಲು ಹೇಳಿದ್ದಳು. ಅಬ್ಬಾ...ಮಿಕ ಬಲೆಗೆ ಬಿತ್ತು ಎಂದು ಮನಸ್ಸಿನಲ್ಲಿಯೇ ಮಂಡಿಗೆ ಮೆಲ್ಲುತ್ತಾ ಕಾವ್ಯಳ ಮನೆಗೆ ಬಂದಾಗ ಸುತ್ತಮುತ್ತಲಿನ ಮಹಿಳೆಯರು, ಗಂಡಸರು ಸೇರಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದರು.
ಈ ಮೊದಲು ಕೂಡ ಹಲವು ಮಹಿಳೆಯರಿಗೆ ಶಿವಾನಂದ ಸಾಕಷ್ಟು ಕಿರುಕುಳ ಕೊಟ್ಟಿದ್ದನಂತೆ. ಇದೀಗ ಕಾಮುಕ ಗ್ರಾಮ ಲೆಕ್ಕಿಗ ಕಾವೂರು ಪೊಲೀಸರ ಅತಿಥಿಯಾಗಿದ್ದಾನೆ.