ಪ್ರಸಕ್ತ ವರ್ಷದಲ್ಲಿ ವಿದ್ಯುತ್ ಕೊರತೆ ಇಲ್ಲ: ಶೋಭಾ ಕರಂದ್ಲಾಜೆ
ಪುತ್ತೂರು, ಶುಕ್ರವಾರ, 28 ಜನವರಿ 2011( 13:44 IST )
ಈ ಬಾರಿ ನಮ್ಮ ಜಲಾಶಯಗಳಲ್ಲಿ ಮೇ ಕೊನೆ ತನಕ ವಿದ್ಯುತ್ ಸರಬರಾಜು ಮಾಡುವಷ್ಟು ನೀರು ಸಂಗ್ರಹವಾಗಿದ್ದು, ಇಲಾಖೆಗಳ ನಡುವೆ ಸಮನ್ವಯತೆ ಮತ್ತು ವಿದ್ಯುತ್ ಉತ್ಪಾದನೆ ಮೇಲೆ ಸುವ್ಯವಸ್ಥಿತ ಯೋಜನೆ ಮಾಡಿರುವುದರಿಂದ ಕರ್ನಾಟಕ ಈ ಬಾರಿ ಸಮೃದ್ಧ ವಿದ್ಯುತ್ ಪಡೆಯಲಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.
ಪುತ್ತೂರಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಹುಟ್ಟೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಕೊರತೆ ಇತ್ತು. ರೈತಾಪಿ ವರ್ಗ ಬೇಸಗೆಯಲ್ಲಿ ಸಂಕಷ್ಟಕ್ಕೆ ಬೀಳುತ್ತಿದ್ದು, ಈ ವರ್ಷ ಅಂತಹ ಪರಿಸ್ಥಿತಿ ಬರುವುದಿಲ್ಲ. ವಿದ್ಯುತ್ ಪರಿಸ್ಥಿತಿ ಸುಧಾರಣೆಗೆ ಏನೆಲ್ಲಾ ಮಾಡಬೇಕು ಎಂಬುದನ್ನು ಆರು ತಿಂಗಳ ಹಿಂದೆಯೇ ಯೋಚಿಸಿದ್ದೆವು. ಅದು ಈಗ ಬಹಳ ಪರಿಣಾಮ ಬೀರಿದೆ. ಮುಖ್ಯವಾಗಿ ಈ ಹಿಂದೆ ಕೆಪಿಟಿಸಿಎಲ್ ಮತ್ತು ಕೆಪಿಸಿ ಮಧ್ಯೆ ಸಮನ್ವಯದ ಕೊರತೆ ಇತ್ತು. ಈಗ ಯಾವ ಸಮಸ್ಯೆಯೂ ಇಲ್ಲ. ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಕೊಡುವುದೊಂದೇ ನಮ್ಮ ಉದ್ದೇಶ ಎಂದರು.
ರಾಯಚೂರು ಥರ್ಮಲ್ ಪವರ್ ಪಾಯಿಂಟ್‌ನಲ್ಲಿ ಕಳೆದ ವರ್ಷ 1,700 ಮೆಗಾವ್ಯಾಟ್ ಸಾಮರ್ಥ್ಯವಿದ್ದರೂ 800 ಮೆಗಾವ್ಯಾಟ್ ಮಾತ್ರ ಉತ್ಪಾದನೆಯಾಗುತ್ತಿತ್ತು. ಈ ಬಾರಿ 1500 ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ. ಅಲ್ಲಿ ಎಂಟನೇ ವಿದ್ಯುತ್ ಘಟಕ ಕಾರ್ಯಾರಂಭಿಸಿದೆ. ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರವೂ ಚೆನ್ನಾಗಿ ಕೆಲಸ ಮಾಡುತ್ತಿದೆ. ಕರಾವಳಿಯ ಯುಪಿಸಿಎಲ್ ಕೂಡಾ ಸಮರ್ಥವಾಗಿದೆ. ಅಲ್ಲದೇ ರಾಜ್ಯ ಒಂದೂವರೆ ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಅನುಭವಿಸುತ್ತಿದೆ. ಇದನ್ನು ಹೊರರಾಜ್ಯಗಳಿಂದ ಮತ್ತು ಇತರ ಮೂಲಗಳಿಂದ ಪಡೆಯಲಾಗುವುದು ಎಂದು ಸಚಿವೆ ವಿವರಿಸಿದರು.