ಜ.31ರೊಳಗೆ ಸಿಎಂ ರಾಜೀನಾಮೆ ಅನಿವಾರ್ಯ: ಸಿದ್ದರಾಮಯ್ಯ ಭವಿಷ್ಯ
ಮೈಸೂರು, ಶನಿವಾರ, 29 ಜನವರಿ 2011( 17:47 IST )
'ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜ. 31ರೊಳಗೆ ರಾಜೀನಾಮೆ ನೀಡಲೇಬೇಕಾಗುತ್ತದೆ. ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಸದ್ಯವೇ ವಿಚಾರಣೆ ಕೈಗೆತ್ತಿಕೊಂಡು, ಮುಖ್ಯಮಂತ್ರಿಗೆ ಸಮನ್ಸ್ ನೀಡುತ್ತದೆ. ಆಗ ಅವರ ರಾಜೀನಾಮೆ ಅನಿವಾರ್ಯ' ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
'ಯಡಿಯೂರಪ್ಪ ಅವರಿಗೆ ನೈತಿಕತೆ ಕಾಡುವುದಿಲ್ಲ. ಅವರೊಬ್ಬ ಭಂಡ ಮುಖ್ಯಮಂತ್ರಿ. ದಪ್ಪ ಚರ್ಮ, ಜೊತೆಗೆ ಸೂಕ್ಷ್ಮತೆಯೂ ಇಲ್ಲ. ಹಾಗಾಗಿ ಅವರು ರಾಜೀನಾಮೆ ನೀಡಲಾರರು. ಆದರೆ, ವಿಶೇಷ ನ್ಯಾಯಾಲಯ ತನ್ನ ಮುಂದೆ ಹಾಜರಾಗಲು ಯಡಿಯೂರಪ್ಪ ಅವರಿಗೆ ಸಮನ್ಸ್ ನೀಡಿದರೆ, ಅವರು ಕಟಕಟೆ ಹತ್ತಲೇ ಬೇಕಾಗುತ್ತದೆ. ಆಗ ರಾಜೀನಾಮೆ ಕೊಡಲೇಬೇಕಾಗುತ್ತದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.
ಬಜೆಟ್ ಅಧಿವೇಶನದ ಪ್ರಶ್ನೆಯೇ ಇಲ್ಲ. ಅಲ್ಲಿಯವರೆಗೆ ಈ ಸರಕಾರ ಇದ್ದರೆ ತಾನೆ. ಈ ಸರಕಾರ ಹೋಗುವವರೆಗೆ ಹೋರಾಟ ನಡೆಸುತ್ತೇವೆ ಎಂದರು. ಈ ಸರಕಾರ, ತಾಂತ್ರಿವಾಗಿ ಉಳಿದಿದೆಯಷ್ಟೆ. ಅನರ್ಹಗೊಂಡಿರುವ ಶಾಸಕರ ಪ್ರಕರಣ ಕುರಿತು ಸದ್ಯವೇ ತೀರ್ಪು ಬರಲಿದ್ದು, ಅದು ಕೂಡ ಮುಖ್ಯಮಂತ್ರಿಗಳ ವಿರುದ್ಧವಾಗಿ ಬರುವ ಸಾಧ್ಯತೆ ಹೆಚ್ಚಿದೆ. ಆಗಲಾದರೂ ಈ ಯಡಿಯೂರಪ್ಪ ಹೋಗ್ಲೇ ಬೇಕು ಅಲ್ವಾ ?' ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ, ಈ ವೇಳೆಗೆ ರಾಜೀನಾಮೆ ನೀಡುತ್ತಿದ್ದರು. ಆರೋಪ ಹೊತ್ತವರು ರಾಜೀನಾಮೆ ನೀಡಿದ ನಿದರ್ಶನಗಳಿಲ್ಲ ಎಂದು ಯಡಿಯೂರಪ್ಪ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಟೆಲಿಫೋನ್ ಕದ್ದಾಲಿಕೆ ಆರೋಪ ಹೊತ್ತ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದರು. ಸಿಬಿಐ ತನಿಖೆಗೆ ಒಳಗಾದ ಆರ್.ಎಲ್.ಜಾಲಪ್ಪ ರಾಜೀನಾಮೆ ನೀಡಿದರು. ಎಸ್.ಎನ್. ನಿಜಲಿಂಗಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ರಾಮರಾವ್, ಪೊಲೀಸ್ ಪೇದೆಯೊಬ್ಬ ಮಾಡಿದ ಅತ್ಯಾಚಾರದ ಹಿನ್ನೆಲೆಯಲ್ಲಿ ಸದನದಲ್ಲಿಯೇ ರಾಜೀನಾಮೆ ನೀಡಿದ್ದರು ಎಂದು ರಾಜ್ಯದ ಹಲವಾರು ಹಳೆಯ ನಿದರ್ಶನಗಳನ್ನು ಉದಾಹರಿಸಿದರು.