ಕಾಮಿ ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಂಜಿತಾ ಶನಿವಾರ ರಾಮನಗರದ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರಾಗಿ ಗೌಪ್ಯ ಹೇಳಿಕೆಯನ್ನು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಪ್ಯ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಧೀಶರಾದ ರೂಪಾದೇವಿಯವರ ಮುಂದೆ ರಂಜಿತಾ ಮಾಡಿದ ಮನವಿಯನ್ನು ಪುರಸ್ಕರಿಸಿದ್ದರು.
ಜೀವ ಬೆದರಿಕೆ, ಅಶ್ಲೀಲ ಚಿತ್ರ ಚಿತ್ರೀಕರಣ ಮಾಡಿರುವುದಾಗಿ ಆರೋಪಿಸಿ ನಟಿ ರಂಜಿತಾ ನಿತ್ಯಾನಂದನ ಮಾಜಿ ಕಾರು ಚಾಲಕ ಲೆನಿನ್ ಹಾಗೂ ಆತನಿಗೆ ಸಹಕರಿಸಿ ಆರತಿ ರಾವ್, ಶ್ರೀಧರ್ ವಿರುದ್ಧ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ರಂಜಿತಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಲೆನಿನ್‌ಗೆ ಸಹಕರಿಸದ ಹಿನ್ನೆಲೆಯಲ್ಲಿ ನನ್ನನ್ನು ತೇಜೋವಧೆ ಮಾಡಲಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನ್ಯಾಯಾಲಯಕ್ಕೆ ನೀಡಿರುವ ಗೌಪ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆನ್ನಲಾಗಿದೆ. ಆದರೆ ರಂಜಿತಾ ಅವರು ಗೌಪ್ಯ ಹೇಳಿಕೆ ನೀಡಿದ್ದು, ಯಾವೆಲ್ಲ ಮಾಹಿತಿ ನೀಡಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಿಲ್ಲ.
ಬಿಡದಿ ಆಶ್ರಮದ ನಿತ್ಯಾನಂದ ಹಾಗೂ ನಟಿ ರಂಜಿತಾ ರಾಸಲೀಲೆ ಘಟನೆ ನಡೆದ ಕೆಲವು ತಿಂಗಳ ನಂತರ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಂಜಿತಾ ಅಶ್ಲೀಲ ಚಿತ್ರದಲ್ಲಿರುವವಳು ನಾನಲ್ಲ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಶ್ವೇತ ವಸ್ತ್ರಧಾರಿಯಾಗಿ ಗಮನ ಸೆಳೆದ ರಂಜಿತಾ; ನಟಿ ರಂಜಿತಾ ಅವರು ಶ್ವೇತವಸ್ತ್ರಧಾರಿಯಾಗಿ ರಾಮನಗರದ ಕೋರ್ಟ್‌ಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದರು. ಕೊರಳಲ್ಲಿ ಜಪಮಾಲೆ ತೊಟ್ಟು ನ್ಯಾಯಾಲಯಕ್ಕೆ ಏಕಾಂಗಿಯಾಗಿ ಹಾಜರಾಗಿದ್ದ ರಂಜಿತಾ ನ್ಯಾಯಾಧೀಶರು ಆಗಮಿಸುವ ಮುನ್ನವೇ ನ್ಯಾಯಾಲಯದ ಸಭಾಂಗಣದಲ್ಲಿ ಹಾಜರಾಗಿದ್ದರು. ನಂತರ ನ್ಯಾಯಾಲಯದಲ್ಲಿ ಗೌಪ್ಯ ಹೇಳಿಕೆಯನ್ನು ಮಂಡಿಸಿದ್ದಾರೆ. ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಲಾಗಿದೆ.