ಫೆಬ್ರುವರಿ ತಿಂಗಳ 3ನೇ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಅಂದೇ ವಿಶೇಷವಾದ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ರಾಜ್ಯದ ಇತಿಹಾಸದಲ್ಲಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಾಡಿಗೆ ಅನ್ನ ನೀಡುವ ಅನ್ನದಾತನಿಗೆ ಶೇ.1ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಹೇಳಿದರು. ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಿದರಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದ ಅನ್ನದಾತನ ಅಂಗಳದಲ್ಲಿ ಸಾವಯವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿಯ ಬಜೆಟ್ ಹಿಂದೆಂದಿಗಿಂತಲೂ ಭಿನ್ನವಾಗಿರಲಿದೆ. ಎಲ್ಲ ವರ್ಗದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಕೆರೆ ಕಟ್ಟೆಗಳ ಸಂರಕ್ಷಣೆ, ಸಾವಯವ ಕೃಷಿಗೆ ಒತ್ತು, ಆಹಾರ ಉತ್ಪಾದನೆಯಲ್ಲಿ ಹೆಚ್ಚಳ, ನೀರಾವರಿ ಯೋಜನೆ ಸೇರಿದಂತೆ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಕೃಷಿ ಮುಂಗಡಪತ್ರ ಒಳಗೊಳ್ಳಲಿದೆ ಎಂದು ವಿವರಿಸಿದ್ದಾರೆ.
ಯಡಿಯೂರಪ್ಪ ಸರಕಾರ ಇರುವವರೆಗೆ ಯಾವುದೇ ರೈತ ಕಣ್ಣೀರು ಹಾಕಬಾರದು. ಅದಕ್ಕಾಗಿ ಪ್ರಸಕ್ತ ವರ್ಷದಿಂದಲೇ ಸಹಕಾರಿ ಸಂಘಗಳ ಮೂಲಕ ರೈತರಿಗೆ ಶೇ.1 ರೂಪಾಯಿ ಬಡ್ಡಿದರದಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು. ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ಸಾವಯವ ಕೃಷಿ ಮಿಷನ್ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಕೇಳಿದೆ. ಆದರೆ ಪ್ರಸಕ್ತ ಬಜೆಟ್‌ನಲ್ಲಿ 250 ಕೋಟಿ ರೂಪಾಯಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.