ಯಡಿಯೂರಪ್ಪನವರೇ ಹುಷಾರ್...ರಾಜಭವನ, ಹೈಕೋರ್ಟ್, ಲೋಕಾಯುಕ್ತ ಈ ಮೂರು ಸಂಸ್ಥೆಗಳು ನಿಮ್ಮನ್ನು ಸುತ್ತುವರಿದಿದೆ. ಈ ಸಂಸ್ಥೆಗಳ ಹಿಡಿತದಿಂದ ನೀವು ತಪ್ಪಿಸಿಕೊಳ್ಳಲಾಗದು. ಒಂದು ವೇಳೆ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರೆ ಕಾನೂನಿನ 'ಎನ್‌ಕೌಂಟರ್' ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಯಡಿಯೂರಪ್ಪನವರು ನಡೆಸಿದ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ಕಾಂಗ್ರೆಸ್ ಕೈಕಟ್ಟಿ, ಕಣ್ಮುಚ್ಚಿ ಕುಳಿತುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್ ಸಿಡಿದೆದ್ದಿದೆ, ಸರಕಾರ ತೊಲಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು.
ಕೆಪಿಸಿಸಿಯು ಜಕ್ಕರಾಯನಕೆರೆ ಮೈದಾನದಲ್ಲಿ ಏರ್ಪಡಿಸಿದ್ದ ನಾಡ ರಕ್ಷಣಾ ರ‌್ಯಾಲಿಯಲ್ಲಿ ಪ್ರಾಸ್ತಾವಿಕ ಭಾಷಣಾ ಮಾಡಿದ ಅವರು, ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೂ ಬಿಡುವುದಿಲ್ಲ. ಸರಕಾರವನ್ನು ಕಿತ್ತೊಗೆಯುವುದೇ ನಮ್ಮ ಮುಂದಿರುವ ಗುರಿ ಎಂದು ಹೇಳಿದರು.
ವಾಜಪೇಯಿ ನಮಗೆ ಆದರ್ಶ, ಅವರ ಆದರ್ಶಗಳನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರುತ್ತೇವೆಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ನೀವು ನಡೆಸಿದ ಭ್ರಷ್ಟಾಚಾರಕ್ಕೆ ವಾಜಪೇಯಿಯವರು ಮಾದರಿಯೇ, ಆದರ್ಶವೇ ಎಂಬುದನ್ನು ನಾಡಿನ ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ನಡೆಸಿದ ಭೂ ಹಗರಣಗಳೂ ಸೇರಿದಂತೆ ಹಲವಾರು ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಅವರಿಗೆ ಬೇರೆ, ಬೇರೆ ಕೆಲಸಗಳು ಹೆಚ್ಚಾಗಿದ್ದು, ಈ ಎಲ್ಲ ಆಡಳಿತ ವೈಫಲ್ಯಗಳು ಮರೆತು ಹೋಗಿರಬೇಕು ಎಂದು ವ್ಯಂಗ್ಯವಾಡಿದರು.