ಚರ್ಚ್ ದಾಳಿ ನಡೆದ ಸಂದರ್ಭದಲ್ಲಿ ಕ್ರಿಶ್ಚಿಯನ್ ಯುವಕರ ಮೇಲೆ ದಾಖಲಿಸಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಭಾನುವಾರ ಸಂತ ಜೋಸೆಫ್ ಇಂಡಿಯನ್ ಶಾಲೆಯಲ್ಲಿ ಕೊಂಕಣಿ ಕ್ಯಾಥೋಲಿಕ್ ಸಂಸ್ಥೆ ಹಮ್ಮಿಕೊಂಡಿದ್ದ ಒಕ್ಕೂಟ ದಿನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,ಚರ್ಚ್ ದಾಳಿ ಕ್ರೈಸ್ತ ಸಮುದಾಯದ ಜನರ ಮೇಲೆ ಮಾಡಿದ ಹಲ್ಲೆಯಾಗಿದೆ. ಚರ್ಚ್ ದಾಳಿ ಸಮಯದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಭಟನೆಗಳಲ್ಲಿ ಭಾಗಿಯಾದ ಕ್ರೈಸ್ತ ಯುವಕರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ಸರಕಾರ ವಾಪಸ್ ಪಡೆಯಬೇಕು ಎಂದರು.
ಈ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಹೆಚ್ಚಿನ ಕಾಲಾವಕಾಶವನ್ನು ತೆಗೆದುಕೊಳ್ಳದೆ ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಮೂಡಿಸುವ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದರು.