'ನನ್ನ ವಿರುದ್ಧ ಮಾಟ-ಮಂತ್ರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ವಿಧಾನಸೌಧದಿಂದ ಮನೆಗೆ ವಾಪಸಾಗಲು ಭಯದ ವಾತಾವರಣ ನಿರ್ಮಾಣವಾಗಿದ್ದು, ನನಗೆ ಜೀವ ಬೆದರಿಕೆ ಇದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಂಜನಗೂಡಿನ ಸುತ್ತೂರು ಜಾತ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನನ್ನು ಮುಗಿಸಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಆದರೆ ತಮ್ಮ ವಿರುದ್ಧ ಯಾರು ಮಾಟ-ಮಂತ್ರ ಮಾಡ್ತಿದ್ದಾರೆ. ಯಾರಿಂದ ಜೀವ ಬೆದರಿಕೆ ಇದೆ ಎಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಿಲ್ಲ.
ಪ್ರತಿಪಕ್ಷಗಳು ಅನಾವಶ್ಯಕವಾಗಿ ತನ್ನ ಮೇಲೆ ಗೂಬೆ ಕೂರಿಸಿಸುತ್ತಿವೆ. ಕಳ್ಳ-ಸುಳ್ಳ ಎಂಬ ಆರೋಪ ಮಾಡುತ್ತಿರುವುದು ವಿಪಕ್ಷಗಳ ಮುಖಂಡರಿಗೆ ಶೋಭೆ ತರುವಂತಹದ್ದಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸುತ್ತೂರಿಗೆ ಆಗಮಿಸುವ ಮುನ್ನ ವಿಶೇಷ ಹೆಲಿಕಾಪ್ಟರ್‌ನಲ್ಲಿ ತುಮಕೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು, ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಬೀದಿ ಹೋರಾಟ ಮಾಡುತ್ತಲೇ ಇರಲಿ. ನಾನು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತೇನೆ. ಅಲ್ಲದೇ ಪ್ರತಿಪಕ್ಷಗಳ ಬಣ್ಣ ಬಯಲು ಮಾಡುವುದಾಗಿ ಗುಡುಗಿದ ಅವರು, ಒಂದು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಲ್ಲಿ ಅರಿವು ಮೂಡಿಸುವುದಾಗಿ ತಿಳಿಸಿದರು.
ಮಾಟ-ಮಂತ್ರ ಮಾಡೋರಿಗೆ ಭಯ ಜಾಸ್ತಿ;ಸಿದ್ದು ತನ್ನ ವಿರುದ್ಧ ಮಾಟ-ಮಂತ್ರ ಮಾಡುತ್ತಿದ್ದಾರೆ, ಜೀವ ಬೆದರಿಕೆ ಇದೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಖಾರವಾದ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಸದಾ ವಾಮಾಚಾರ, ಹೋಮ-ಹವನ ಮಾಡುವವರಿಗೆ ಜೀವನದುದ್ದಕ್ಕೂ ಭಯ ಇದ್ದೇ ಇರುತ್ತದೆ ಎಂದು ತಿರುಗೇಟು ನೀಡಿದರು.
ರಾಜ್ಯದ ಮುಖ್ಯಮಂತ್ರಿಗಳೇ ತನಗೆ ಜೀವ ಬೆದರಿಕೆ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರೆ, ರಾಜ್ಯದ ಜನತೆಗೆ ಯಾವ ರೀತಿ ರಕ್ಷಣೆ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಈ ರೀತಿಯ ಹೇಳಿಕೆ ಹಾಸ್ಯಾಸ್ಪದವಾದದ್ದು ಎಂದು ಸಿದ್ದರಾಮಯ್ಯ ಹೇಳಿದರು.