ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನ ಹೆಚ್ಚಳ ಸೇರಿದಂತೆ ನಿವೃತ್ತಿ ವೇತನ ಒದಗಿಸುವ ಹಾಗೂ ಬೇಸಿಗೆ ರಜೆ ವಿಸ್ತರಿಸುವ ಮಹತ್ತರ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ. ಮತ್ತು ಸಹಾಯಕಿಯರಿಗೆ 200 ರೂ.ಗಳ ಗೌರವ ಧನವನ್ನು ಹೆಚ್ಚಿಸಲು ಮುಖ್ಯಮಂತ್ರಿಗಳು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸ್ತುತ 2,500 ಹಾಗೂ ಸಹಾಯಕಿಯರಿಗೆ 1,250 ಗೌರವ ಧನ ನೀಡಲಾಗುತ್ತಿದೆ. ಗೌರವ ಧನ ಏರಿಕೆ ಯಾವಾಗಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಲು ಸರಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಹತ್ತು ಕೋಟಿ ರೂಪಾಯಿಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಒದಗಿಸಲಾಗುವುದು ಎಂದರು.
ಈ ಕಾರ್ಯಕರ್ತೆಯರಿಗೆ ಎಲ್ಐಸಿ ಮೂಲಕ ಪಿಂಚಣಿ ನೀಡಲಾಗುವುದು. ಅಂಗನವಾಡಿ ಕೇಂದ್ರಗಳಿಗೆ 15 ದಿನಗಳ ಬೇಸಿಗೆ ರಜೆ ನೀಡುವ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಈಗಿರುವ ಆರೋಗ್ಯ ನೆರವನ್ನು 20ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.