ಯಾವುದೇ ನ್ಯಾಯಾಲಯದಲ್ಲಿ ಯಾವುದೇ ರೀತಿಯ ಆರೋಪಗಳು ಸಾಬೀತಾಗುವ ಮೊದಲೇ ಪ್ರತಿಪಕ್ಷಗಳ ಮುಖಂಡರು ನನ್ನ ರಾಜಿನಾಮೆಗೆ ಒತ್ತಾಯಿಸುವುದು ರಾಜ್ಯದ ಅಭಿವೃದ್ಧಿ ಸಹಿಸದ ಹತಾಶ ಮನೋಭಾವನೆಯ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದೂ ಅಲ್ಲದೆ, ಏಕವಚನದಲ್ಲಿ ಸಂಬೋಧಿಸಿ ರಾಜೀನಾಮೆ ಆಗ್ರಹಿಸಿರುವುದನ್ನು ನೋಡಿದರೆ ಅವರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ವಿಶ್ವಾಸ ಇಲ್ಲದಿರುವುದು ಸ್ಪಷ್ಟವಾಗುತ್ತದೆ ಎಂದರು.
ಅಲ್ಲದೇ ಮುಂದಿನ ಬಜೆಟ್ ಅಧಿವೇಶನದಲ್ಲಿ ನಿಯಮಾವಳಿಗಳ ಅಡಿಯಲ್ಲಿ ಪ್ರತಿಪಕ್ಷ ಕೋರುವ ಯಾವುದೇ ವಿಷಯದಲ್ಲಿ ನಾನು ಚರ್ಚಿಸಲು ಸಿದ್ದನಿದ್ದೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ. ಸರಕಾರದ ದಿಟ್ಟ ಪ್ರಯತ್ನದಿಂದ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಮುಂದುವರಿದಲ್ಲಿ ತಮ್ಮ ಅಸ್ತಿತ್ವ ಕಳೆದು ಹೋಗುತ್ತದೆ ಎಂಬ ಭೀತಿಯಿಂದ ಪ್ರತಿಪಕ್ಷಗಳು ಭ್ರಷ್ಟಾಚಾರದ ಹಗರಣಗಳು ಎಂದು ಆರೋಪಿಸಿ ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿವೆ.
ರಾಜ್ಯದ ಮತದಾರರು ನಮಗೆ ಆಶೀರ್ವಾದ ಮಾಡಿದ್ದಾರೆ. ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗಾಗಿ ಪ್ರತಿಪಕ್ಷಗಳ ಯಾವುದೇ ಆರೋಪಕ್ಕೆ ರಾಜ್ಯದ ಜನರು ಸೊಪ್ಪು ಹಾಕದೆ, ಬಿಜೆಪಿ ಪಕ್ಷವನ್ನು ಮುಂದೆಯೂ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ತನಗಿದೆ ಎಂದು ತಿಳಿಸಿದ್ದಾರೆ.