ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಲಿಪಶುಗಳಿಲ್ಲದಿದ್ದರೂ ಅತ್ಯಾಚಾರ ಕೇಸು: ಸ್ವಾಮಿ ನಿತ್ಯಾನಂದ
(Swami Nityananda | Bidadi | Dhyanashram | Ranjita | Sex Scandal | Morphed Video)
ಬಲಿಪಶುಗಳಿಲ್ಲದಿದ್ದರೂ ಅತ್ಯಾಚಾರ ಕೇಸು: ಸ್ವಾಮಿ ನಿತ್ಯಾನಂದ
ಬೆಂಗಳೂರು, ಮಂಗಳವಾರ, 1 ಫೆಬ್ರವರಿ 2011( 20:42 IST )
WD
ರಾಸಲೀಲೆ ಪ್ರಕರಣ ಸ್ಫೋಟವಾದ ಬಳಿಕ ಮೊದಲ ಬಾರಿ ಮೌನ ಮುರಿದು ಪೊಲೀಸರು ಮತ್ತು ಉನ್ನತ ರಾಜಕಾರಣಿಗಳ ವಿರುದ್ಧ ಕಿಡಿ ಕಾರಿದ ನಿತ್ಯಾನಂದ ಧ್ಯಾನಪೀಠದ ಸ್ವಾಮಿ ನಿತ್ಯಾನಂದ, ಅತ್ಯಾಚಾರಕ್ಕೆ ಬಲಿಯಾದವರ ಹೆಸರಿಲ್ಲದೆಯೇ ಅತ್ಯಾಚಾರ ಪ್ರಕರಣ ದಾಖಲಾದ ಮೊದಲ ವ್ಯಕ್ತಿ ತಾನು ಎಂದು ವಿಷಾದಿಸಿದರು.
ಬೆಂಗಳೂರು ಸಮೀಪದ ಬಿಡದಿಯ ಧ್ಯಾನಾಶ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಸ್ವಾಮಿ ನಿತ್ಯಾನಂದ, ತನ್ನ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಕೇಸಿನಲ್ಲಿ ಅತ್ಯಾಚಾರಕ್ಕೆ ಯಾರು ಬಲಿಯಾಗಿದ್ದಾರೆಂಬುದರ ಉಲ್ಲೇಖವೇ ಇಲ್ಲ, ಆದರೆ ನನ್ನನ್ನು ಆರೋಪಿ ಎಂದು ಹೆಸರಿಸಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದವರೇ ಇಲ್ಲದಿರುವಾಗ, ನೀವು ನನ್ನನ್ನು ಆರೋಪಿ ಎಂದು ಕರೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕೆಲವು ಉನ್ನತ ಮಟ್ಟದ ರಾಜಕಾರಣಿಗಳು ತನ್ನಿಂದ 100 ಕೋಟಿ ರೂಪಾಯಿ ಬೇಡಿದ್ದರು. ಈ ಬೇಡಿಕೆ ತಿರಸ್ಕರಿಸಿದಾಗ, ಕಡೆಗೆ 60 ಕೋಟಿಯಾದರೂ ಕೊಡಿ ಎಂದು ಅಂಗಲಾಚಿದರು. ನಂತರವೂ ಅದರ ಬಗೆಗೆ ಚೌಕಾಶಿ ಮಾಡಲಾರಂಭಿಸಿದ್ದರು. ಕೊನೆಗೆ ಸಿನಿಮಾ ನಟಿ ರಂಜಿತಾ ಜೊತೆಗೆ ಶ್ಲೀಲವಲ್ಲದ ದೃಶ್ಯಗಳಿರುವಂತೆ ನಕಲಿ ವೀಡಿಯೋ ತಯಾರಿಸಿ ಅದನ್ನು ವೆಬ್‌ಸೈಟುಗಳಿಗೆ ಅಪ್‌ಲೋಡ್ ಮಾಡಿದರು ಎಂದು ನಿತ್ಯಾನಂದ ನುಡಿದರು.
ಇತ್ತೀಚೆಗೆ ನಟಿ ರಂಜಿತಾ ಕೂಡ ಮಾಧ್ಯಮಗಳೆದುರು ಕಾಣಿಸಿಕೊಂಡು, ವೀಡಿಯೋದಲ್ಲಿದ್ದುದು ತಾನಲ್ಲ, ಇದು ಸ್ವಾಮಿ ನಿತ್ಯಾನಂದರ ಮಾಜಿ ಕಾರು ಚಾಲಕ ಲೆನಿನ್ ಕುರುಪ್ಪನ್ ಎಂಬಾತನ ಷಡ್ಯಂತ್ರ ಎಂದು ಸ್ಪಷ್ಟಪಡಿಸಿದ್ದರು.
ಕನ್ನಡಿಗರು ಶಾಂತಿ ಪ್ರಿಯರು... ನಕಲಿ ವೀಡಿಯೋ ಹೊರಬಂದ ಬಳಿಕದ ಪ್ರಸಂಗಗಳನ್ನು ನೆನಪಿಸಿಕೊಂಡ ಅವರು, ಕರ್ನಾಟಕದ ಜನತೆ ಶಾಂತಿಪ್ರಿಯರು. ಅವರಿಗೆ ನಿಜಕ್ಕೂ ನಾನು ಆಭಾರಿ. ಆದರೆ ತಮಿಳುನಾಡಿನಲ್ಲಿರುವ ನನ್ನ ಆಶ್ರಮಗಳ ಮೇಲೆ ದಾಳಿಗಳು ನಡೆದಿವೆ. ಭಕ್ತರ ಮೇಲೆ ದೌರ್ಜನ್ಯ ನಡೆದಿದೆ ಎಂದರು. ವೀಡಿಯೋ ಹೊರಬಂದಾಗಿನಿಂದಲೂ ತಮಿಳುನಾಡು ಪೊಲೀಸರಿಂದ ಅನಗತ್ಯ ಕಿರುಕುಳ ನಡೆಯುತ್ತಿದೆ. ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಿ ಏನೇನೋ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದರು.
ಪೊಲೀಸರ ವಿರುದ್ಧವೂ ಕೆಂಡ... ಎಲ್ಲ ವಿವರಗಳನ್ನೂ ತನಿಖೆ ನಡೆಸುತ್ತಿರುವ ಸಿಐಡಿಗೆ ತಿಳಿಸಿದ್ದೇನಾದರೂ, ಅವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ನನ್ನ ಬಗ್ಗೆ ಕನಿಕರ ತೋರಿದ ಅವರು ರಿಲ್ಯಾಕ್ಸ್ ಆಗಿರುವಂತೆ ಹೇಳಿದರು. ಬಂಧನವಾದ ಒಂದೇ ದಿನದೊಳಗೆ ಪೊಲೀಸರು ನನ್ನ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡರು. ಯಾವುದೇ ಆರ್ಥಿಕ ಅಪರಾಧ ಮಾಡದಿದ್ದರೂ ಬ್ಯಾಂಕ್ ಖಾತೆಗಳಿಗೂ ತಡೆಯೊಡ್ಡಿದರು. ಆದರೆ ರಾಜ್ಯ ನ್ಯಾಯಾಲಯವು ಇದನ್ನು ತೆರವುಗೊಳಿಸಿತು ಎಂದ ಅವರು, ತನ್ನ ಪಾಸ್‌ಪೋರ್ಟನ್ನು ಇದುವರೆಗೂ ಪೊಲೀಸರು ಹಿಂತಿರುಗಿಸಿಲ್ಲ. ಇದು ಅನ್ಯಾಯ ಎಂದರು.
ಹಣಕ್ಕಾಗಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದವರ ಮತ್ತು ವಿಶ್ವಾದ್ಯಂತ ನನ್ನ ಪ್ರತಿಷ್ಠೆಗೆ ಮಸಿ ಬಳಿದಿರುವ ವ್ಯಕ್ತಿಗಳ ವಿವರಗಳು ನನ್ನಲ್ಲಿವೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ, ಎಲ್ಲವನ್ನೂ ನ್ಯಾಯಾಲಯದಲ್ಲಿ ಬಹಿರಂಗಪಡಿಸುವೆ ಎಂದು ಕಳೆದ ಏಪ್ರಿಲ್ 21ರಂದು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಬಂಧಿತರಾಗಿದ್ದ ಸ್ವಾಮಿ ನಿತ್ಯಾನಂದ ನುಡಿದರು.