ಮಾಟ-ಮಂತ್ರ ಮಾಡಿಸಿ ತಮ್ಮನ್ನು ಕೊಲ್ಲುವ ಹುನ್ನಾರ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಆತಂಕವನ್ನು ಹೊರಹಾಕಿದ್ರಲ್ಲಿ ತಪ್ಪೇನಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮ್ಮ ವಿರುದ್ಧ ವಾಮಾಚಾರ ಮಾಡಲಾಗುತ್ತಿದೆ ಎಂಬುದು ತಿಳಿದಾಗ ಅದನ್ನು ಮನಸ್ಸಿನಲ್ಲಿಟ್ಟು ಕೊರಗುವ ಬದಲು ಬಹಿರಂಗಪಡಿಸುವುದೇ ಒಳ್ಳೆಯದು. ಅಲ್ಲದೇ ವೈಯಕ್ತಿಕವಾಗಿ ನಾನೂ ವಾಮಾಚಾರವನ್ನು ನಂಬುತ್ತೇನೆ ಎಂದು ತಿಳಿಸಿದರು.
ಮಾಟ-ಮಂತ್ರ ಮಾಡುವುದರಲ್ಲಿ ರಾಜ್ಯ ಪ್ರಸಿದ್ಧಿ ಪಡೆದಿದೆ. ವಾಮಮಾರ್ಗದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಮಾಟ ಮಂತ್ರದ ಮೊರೆ ಹೋಗುವ ಪರಿಸ್ಥಿತಿಯೇ ಹೆಚ್ಚಾಗಿದೆ ಎಂದು ವಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಆರೋಪಿಸಿದರು.
ತಮಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿದೆ, ಸರಕಾರವನ್ನು ಉರುಳಿಸುವ ಇಚ್ಛೆ ನಮಗಿಲ್ಲ ಎಂದು ಹೇಳಿಕೆ ಕೊಡುತ್ತಿರುವ ನಾಯಕರು ವಾಮಮಾರ್ಗ ಅನುಸರಿಸಲು ಏನಿಲ್ಲ ಮಾಡುತ್ತಿದ್ದಾರೆ ಎಂಬುದು ಕೂಡ ತಿಳಿದಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ತನ್ನನ್ನು ಮಾಟ-ಮಂತ್ರದ ಮೂಲಕ ಹತ್ಯೆಗೈಯಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದ್ದು, ನನಗೆ ಜೀವ ಬೆದರಿಕೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಆರೋಪವನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿದ್ದವು.