ಮಾಟ-ಮಂತ್ರ ಮಾಡಿಸಿ ತನ್ನನ್ನು ಕೊಲ್ಲುವ ಸಂಚು ನಡೆಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾಮಾಚಾರವನ್ನು ಬಲವಾಗಿ ನಂಬುತ್ತಾರಂತೆ. ಹಾಗಾಗಿಯೇ ಅವರು ಅದರ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳು ಮೂರು ರಾತ್ರಿ ಬೆತ್ತಲೆಯಾಗಿಯೇ ನೆಲದಲ್ಲಿ ಮಲಗಿ ನಿದ್ದೆ ಮಾಡಿರುವುದಾಗಿ ಅವರ ನಿಕಟವರ್ತಿಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಸೋಮವಾರದಿಂದ ಮೂರು ದಿನಗಳ ಕಾಲ ಅವರು ನೆಲದಲ್ಲಿ ಬೆತ್ತಲೆಯಾಗಿ ನಿದ್ದೆ ಮಾಡುವಂತೆ ಜ್ಯೋತಿಷಿಯೊಬ್ಬರು ಸೂಚಿಸಿದ್ದರಂತೆ. ಇದಕ್ಕೆ ಕಾರಣ, ತನ್ನ ವಿರುದ್ಧ ಮಾಡಿರುವ ಮಾಟ-ಮಂತ್ರ ಪ್ರಭಾವ ಕುಂದಿಸುವ ವಿಧಾನವಾಗಿದೆಯಂತೆ. ಅಷ್ಟೇ ಅಲ್ಲ ಮುಂದಿನ ವಾರದಿಂದ ನದಿಯಲ್ಲಿ ಸೂರ್ಯ ನಮಸ್ಕಾರದ ವಿಧಿಯನ್ನು ಆರಂಭಿಸಲಿದ್ದಾರಂತೆ.
ರಾಜಕೀಯ ವಿರೋಧಿಗಳು ತನ್ನನ್ನು ಮಾಟ-ಮಂತ್ರ ಮಾಡುವ ಮೂಲಕ ಕೊಲ್ಲುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗಷ್ಟೇ ಬಹಿರಂಗವಾಗಿ ಹೇಳಿದ್ದರು. ಇದರಿಂದಾಗಿ ನಾನು ಜೀವ ಬೆದರಿಕೆಯಲ್ಲಿದ್ದೇನೆ. ಮನೆಯಿಂದ ವಿಧಾನಸೌಧಕ್ಕೆ, ವಿಧಾನಸೌಧದಿಂದ ಮನೆಗೆ ಸುರಕ್ಷಿತವಾಗಿ ತಲುಪುತ್ತೇನೋ ಇಲ್ಲವೋ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದರು.
'ಮುಖ್ಯಮಂತ್ರಿಗಳ ವಿರುದ್ಧ ಮಾಡಿರುವ ಮಾಟ-ಮಂತ್ರದಿಂದ ರಕ್ಷಣೆ ದೊರೆಯುವ ನಿಟ್ಟಿನಲ್ಲಿ ಕೆಲವೊಂದು ಧಾರ್ಮಿಕ ವಿಧಾನಗಳನ್ನು ಅನುಸರಿಸಲು ಸಲಹೆ ನೀಡಿರುವುದಾಗಿ' ಮುಖ್ಯಮಂತ್ರಿಗಳ ಕುಟುಂಬ ಪುರೋಹಿತರಾಗಿರುವ ಭಾನುಪ್ರಕಾಶ್ ಶರ್ಮಾ ಸಿಎನ್‌ಎನ್-ಐಬಿಎನ್‌ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಯಾವುದೇ ರೀತಿಯ ತೊಂದರೆ ಎದುರಾಗದಂತೆ ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಸಹಸ್ರ ಚಂಡಿಕಾ ಯಜ್ಞ ಹಾಗೂ ಗಣಪತಿಗೆ ಒಂದು ಲಕ್ಷ ಮೋದಕವನ್ನು ಅರ್ಪಿಸುವ ಹೋಮ ಮಾಡುವಂತೆಯೂ ಸೂಚಿಸಿರುವುದಾಗಿ ಶರ್ಮಾ ವಿವರಿಸಿದ್ದಾರೆ. ಅಲ್ಲದೇ ಪ್ರಸಕ್ತ ಸ್ಥಿತಿ ಅವರಿಗೆ ತುಂಬಾ ಗಂಡಾಂತರಕಾರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದೊಳಗಿನ ತಿರುಗಾಟವನ್ನು ಕಡಿಮೆ ಮಾಡುವಂತೆಯೂ ಸೂಚಿಸಿರುವುದಾಗಿ ಶರ್ಮಾ ಹೇಳಿದ್ದಾರೆ.
ಮಾಟ-ಮಂತ್ರದ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಅಮಾವಾಸ್ಯೆಯ ಮೊದಲ ಎರಡು ರಾತ್ರಿಗಳ ಕಾಲ ನೆಲದಲ್ಲಿ ನಗ್ನವಾಗಿ ಮಲಗುವಂತೆ ಹಾಗೂ ಅಮಾವಾಸ್ಯೆ ರಾತ್ರಿಯಂದು ಆ ವಿಧಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಈ ವಿಧಾನ ಮಾಡುವ ನಿಟ್ಟಿನಲ್ಲಿಯೇ ಮುಖ್ಯಮಂತ್ರಿಗಳು ತಮ್ಮ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿರುವ ಸಂಬಂಧಿಗಳ ಮನೆಯಲ್ಲಿ ವಾಸ್ತವ್ಯ ಹೂಡಿರುವುದಾಗಿ ಶರ್ಮಾ ಹೇಳಿದ್ದಾರೆ.
ನದಿಯಲ್ಲಿ ಸಂಪೂರ್ಣವಾಗಿ ನಗ್ನವಾಗಿ ಸೂರ್ಯ ನಮಸ್ಕಾರದ ವಿಧಿ ಮಾಡಬೇಕಾಗಿದೆ. ಇದನ್ನು ಮುಖ್ಯಮಂತ್ರಿಗಳು ಫೆಬ್ರುವರಿ 8 ಮತ್ತು 10ರಂದು ನದಿಯಲ್ಲಿ ಸೂರ್ಯ ನಮಸ್ಕಾರ ಮಾಡಿ ಪೂರೈಸುವಂತೆ ಶರ್ಮಾ ಸಲಹೆ ನೀಡಿದ್ದಾರಂತೆ.