ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ 50 ತಿಂಗಳ ಅಧಿಕಾರಾವಧಿಯಲ್ಲಿ ಕನಿಷ್ಠ ಒಂದು ಸಾವಿರ ಕೋಟಿ ರೂ.ಮೌಲ್ಯದ ಜಮೀನು ಖರೀದಿ ಮಾಡಿದ್ದಾರೆಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಆರೋಪಿಸಿದ್ದರೆ, ಮತ್ತೊಂದೆಡೆ ಗೌಡರ ಕುಟುಂಬ ಅಕ್ರಮವಾಗಿ ಸಂಪಾದಿಸಿರುವ ಆಸ್ತಿ ವಿವರವನ್ನು ಕಲೆ ಹಾಕಿರುವ ಮುಖ್ಯಮಂತ್ರಿಗಳು ತುರ್ತು ಕಾನೂನು ಕ್ರಮಕ್ಕೆ ಆದೇಶ ನೀಡುವ ಮೂಲಕ ಗೌಡರ ಹಾಗೂ ಸಿಎಂ ನಡುವಿನ ಜಂಗೀಕುಸ್ತಿ ಮುಂದುವರಿದಂತಾಗಿದೆ.
ಯಡಿಯೂರಪ್ಪ ಅವರು ತಮ್ಮ ಹಾಗೂ ಮಕ್ಕಳ ಹೆಸರಿನಲ್ಲಿ ಶಿವಮೊಗ್ಗ, ಶಿಕಾರಿಪುರ ಮತ್ತು ಬೆಂಗಳೂರು ಸುತ್ತಮುತ್ತ ಜಮೀನು ಖರೀದಿ ಮಾಡಿದ್ದಾರೆ. ಇದರ ಮೌಲ್ಯ ಸರಕಾರಿ ದರದಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳಾಗಲಿವೆ. ಮಾರಕಟ್ಟೆ ದರದಲ್ಲಿ 4ರಿಂದ 5 ಸಾವಿರ ಕೋಟಿ ರೂ.ಗಳಷ್ಟಾಗಲಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಬೇಕು. ಅವರಿಂದ ಪತ್ತೆ ಮಾಡಲು ಸಾಧ್ಯವಾಗದಿದ್ದರೆ ನಾನೇ ದಾಖಲೆಗಳನ್ನು ಒದಗಿಸುತ್ತೇನೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಪುತ್ರಿ ಉಮಾದೇವಿ ಹಾಗೂ ಪ್ರೇರಣಾ ಟ್ರಸ್ಟ್ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಈ ಬಗ್ಗೆ ನನ್ನಲ್ಲಿ ದಾಖಲೆಗಳಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡುವವರಿಗೆ ಐದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಅವರು ಮತ್ತು ಅವರ ಮಕ್ಕಳು ಅಕ್ರಮವಾಗಿ ಖರೀದಿಸಿರುವ ಜಮೀನಿನ ದಾಖಲೆಗಳನ್ನು ಕೊಡುತ್ತೇನೆ. ಬಹುಮಾನ ನನಗೆ ಕೊಡಲಿ ಅದನ್ನು ಯಾವುದಾದರು ಸೇವಾ ಟ್ರಸ್ಟ್‌ಗೆ ನೀಡುತ್ತೇನೆ ಎಂದರು.
ಏತನ್ಮಧ್ಯೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿಯವರು ಗೌಡರ ಕುಟುಂಬಕ್ಕೆ ಸೇರಿದ ಅಕ್ರಮ ಆಸ್ತಿಯ ಮಾಹಿತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೀಡಿದ್ದು, ಇದನ್ನು ಪರಿಶೀಲಿಸಿದ ನಂತರ ಮುಖ್ಯಮಂತ್ರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.