ದಾಖಲೆ ತೋರಿಸಿದ್ರೆ 24 ಗಂಟೆಯೊಳಗೆ ರಾಜೀನಾಮೆ: ಸಿಎಂ ಸವಾಲ್
ಬೆಂಗಳೂರು, ಗುರುವಾರ, 3 ಫೆಬ್ರವರಿ 2011( 13:10 IST )
NRB
'ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೇನಾಮಿ ಆಸ್ತಿ ಮಾಡಿದ್ದೇನೆಂಬ ಆರೋಪದ ಕುರಿತ ದಾಖಲೆ ತೋರಿಸಿದ್ರೆ ಸಾಕು'...24 ಗಂಟೆಯೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಅಷ್ಟೇ ಅಲ್ಲ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣಗೆ ನೇರ ಸವಾಲು ಹಾಕಿದ್ದಾರೆ.
ಬುಧವಾರ ಟಿ.ದಾಸರಹಳ್ಳಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು,ನನ್ನ 50 ತಿಂಗಳ ಅಧಿಕಾರಾವಧಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಜಮೀನು ಖರೀದಿಸಿರುವ ಬಗ್ಗೆ ರೇವಣ್ಣನ ಬಳಿ ದಾಖಲೆ ಇದ್ದರೆ. ಅದನ್ನು ನ್ಯಾಯಾಲಯಕ್ಕೆ ಅಥವಾ ಲೋಕಾಯುಕ್ತರಿಗೆ ನೀಡಲಿ. ಇಲ್ಲದಿದ್ದರೆ ನನಗೆ ತೋರಿಸಿದರೂ ಸಾಕು 24 ಗಂಟೆಯೊಳಗೆ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 50 ತಿಂಗಳ ಅಧಿಕಾರಾವಧಿಯಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಜಮೀನು ಖರೀದಿಸಿದ್ದಾರೆ. ಅದರ ಮಾರುಕಟ್ಟೆ ಬೆಲೆ ನಾಲ್ಕೈದು ಸಾವಿರ ಕೋಟಿ ರೂಪಾಯಿಯಷ್ಟಿದೆ. ಈ ಬಗ್ಗೆ ತನ್ನ ಬಳಿ ದಾಖಲೆ ಇರುವುದಾಗಿ ಜೆಡಿಎಲ್‌ಪಿ ಮುಖಂಡ ರೇವಣ್ಣ ಗಂಭೀರವಾಗಿ ಆರೋಪಿಸಿದ್ದರು.
ವಿಪಕ್ಷ ಮುಖಂಡರು ನನ್ನ ಮೇಲೆ ಅನಾವಶ್ಯಕವಾಗಿ ಗೂಬೆ ಕೂರಿಸುವುದು ಬೇಡ. ನಿಮ್ಮಲ್ಲಿರುವ ದಾಖಲೆ ಕೋರ್ಟ್‌ಗೆ ಕೊಡಿ. ನಾನು ಎಲ್ಲವನ್ನೂ ಎದುರಿಸಲು ಸಿದ್ದನಿದ್ದೇನೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಸಿಎಂ ಒಳ್ಳೆ ಕೆಲಸ ಮಾಡ್ತಿದ್ದಾರೆ-ರಾಜ್‌ನಾಥ್ ಸಿಂಗ್ ಶಹಬ್ಬಾಸ್ ಗಿರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರಾಜನಾಥ್ ಸಿಂಗ್ ಶಹಬ್ಬಾಸ್‌ಗಿರಿ ನೀಡಿದ್ದು, ವಿಪಕ್ಷಗಳು ಅವರ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ಹಗರಣಗಳ ಬಗ್ಗೆ ಲೋಕಾಯುಕ್ತ ಹಾಗೂ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಹಾಗಾಗಿ ತನಿಖಾ ವರದಿ ಬರೋವವರೆಗೆ ಕಾಯಿರಿ. ಆರೋಪ ಸಾಬೀತಾದ್ರೆ ಸಿಎಂ ಪದತ್ಯಾಗ ಮಾಡುತ್ತಾರೆ ಎಂದು ಹೇಳುವ ಮೂಲಕ ಸಿಎಂ ಬೆಂಬಲಕ್ಕೆ ನಿಂತಿದ್ದಾರೆ.
ಯಡಿಯೂರಪ್ಪ ವಿರುದ್ಧ ವಿಪಕ್ಷಗಳು ಈಗ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆ ನಿಟ್ಟಿನಲ್ಲಿ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅಲ್ಲದೇ ಯಡಿಯೂರಪ್ಪ ವಿರುದ್ಧ ಬಿಜೆಪಿ ಯಾವುದೇ ಆಂತರಿಕ ತನಿಖೆ ನಡೆಸಿಲ್ಲ ಎಂದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಅಚ್ಚರಿ ತಂದಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.