ಪ್ರಸಕ್ತ ಸಾಲಿನ ಮುಂಗಡ ಪತ್ರ ಫೆಬ್ರುವರಿ 24ರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿದ್ದಾರೆ ಎಂದು ಸಚಿವ ವಿ,ಎಸ್.ಆಚಾರ್ಯ ತಿಳಿಸಿದ್ದಾರೆ. ಇದು ಕೇಂದ್ರ ಸರಕಾರದ ಬಜೆಟ್‌ಗೂ ಮುನ್ನ ರಾಜ್ಯ ಸರಕಾರದ ಬಜೆಟ್ ಮಂಡನೆಯಾದಂತಾಗಲಿದೆ.
ಗುರುವಾರ ಸಂಜೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿರುವುದಾಗಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಅವರು ಹೇಳಿದ್ದಾರೆ.
15 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ. ಅಲ್ಲದೇ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಲೋಕಾಯುಕ್ತ ಸಿಬ್ಬಂದಿ ವೇತನ ಶೇ.10ರಷ್ಟು ಏರಿಕೆ, ರಾಜ್ಯದಲ್ಲಿರುವ ಸುಮಾರು 1.5 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಗಡಿನಾಡ ಅಭಿವೃದ್ಧಿಗೆ ಹತ್ತು ಕೋಟಿ ರೂಪಾಯಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಮಂಡನೆಯೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರನೇ ಬಾರಿ ಮುಂಗಡ ಪತ್ರ ಮಂಡಿಸಿದಂತಾಗಿದೆ. ಈ ಬಾರಿಯ ಬಜೆಟ್ ರೈತ ಸ್ನೇಹಿ ಹಾಗೂ ಜನಪರವಾಗಲಿದೆ ಎಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳು ತಿಳಿಸಿದ್ದರು. ಅಷ್ಟೇ ಅಲ್ಲ ರೈತರ ಅಭಿವೃದ್ಧಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಅನ್ನು ಮಂಡಿಸುವುದಾಗಿಯೂ ಅವರು ಹೇಳಿದ್ದರು.
ಯಡಿಯೂರಪ್ಪ ದೊಡ್ಡ ಆರ್ಥಿಕ ತಜ್ಞ-ಕುಮಾರಸ್ವಾಮಿ: ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೊಡ್ಡ ಆರ್ಥಿಕ ತಜ್ಞರಾಗಿದ್ದಾರೆ. ಹಾಗಾಗಿಯೇ ಅವರು ಕೇಂದ್ರ ಸರಕಾರಕ್ಕಿಂತಲೂ ಮೊದಲು ರಾಜ್ಯ ಬಜೆಟ್ ಮಂಡಿಸಲು ಮುಂದಾಗುವ ಮೂಲಕ ಕೇಂದ್ರಕ್ಕೆ ಮಾರ್ಗದರ್ಶನ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.