ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚಿದಾನಂದ ಮೂರ್ತಿಗೆ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲ
(Chidananda Murthy | Hansraj Bharadwaj | Governor | Doctorate | Bangalore University)
ಚಿದಾನಂದ ಮೂರ್ತಿಗೆ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲ
ಬೆಂಗಳೂರು, ಶುಕ್ರವಾರ, 4 ಫೆಬ್ರವರಿ 2011( 16:37 IST )
ಗೋಹತ್ಯೆ ನಿಷೇಧದ ಪ್ರಬಲ ಪ್ರತಿಪಾದಕರಾಗಿದ್ದ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿಯವರಿಗೆ ಗೌರವ ಡಾಕ್ಟರೇಟ್ ನೀಡುವ ಬೆಂಗಳೂರು ವಿವಿ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ ಕೆಲವೇ ಕ್ಷಣಗಳಲ್ಲಿ ಅನುಮತಿಯನ್ನು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ವಾಪಸ್ ತೆಗೆದುಕೊಂಡಿದ್ದಾರೆ.
ಈಗಾಗಲೇ ಸರಕಾರದೊಂದಿಗೆ ಸಂಘರ್ಷದೊಂದಿಗೆ ರಾಜಭವನದ ಪಾವಿತ್ರ್ಯ ಹಾಳು ಮಾಡಿದ್ದಾರೆ ಎಂಬ ಆರೋಪಗಳ ನಡುವೆಯೇ ಅವರ ಈ ನಡೆಯು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಚಿಮೂ, ಕವಿ ಕೆ.ಎಸ್.ನಿಸಾರ್ ಅಹ್ಮದ್ ಮತ್ತು ಕಲಾವಿದ ಬಿ.ಕೆ.ಎಸ್.ವರ್ಮಾ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಶಿಫಾರಸನ್ನು ಬೆಂಗಳೂರು ವಿವಿಯು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಮೂವರ ಹೆಸರಿಗೂ ರಾಜ್ಯಪಾಲರು ಅಂಕಿತ ಹಾಕಿದ ಬಳಿಕ, ವಿವಿಯು ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿಬಿಟ್ಟಿತು. ಆದರೆ, ಕೆಲವೇ ಗಂಟೆಗಳಲ್ಲಿ, ಪತ್ರಿಕೆಗಳಿಗೆ ಬಂದ ಹೊಸ ಹೇಳಿಕೆಯಲ್ಲಿ, ಮೂರ್ತಿಯವರಿಗೆ ಡಾಕ್ಟರೇಟ್ ನೀಡುವ ಪ್ರಸ್ತಾಪವನ್ನು ವಿವಿ ಚಾನ್ಸ್‌ಲರ್ ಕೂಡ ಆಗಿರುವ ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎಂದು ಹೇಳಲಾಯಿತು.
ಆದರೆ, ಯಾವ ಕಾರಣಕ್ಕೆ ಮೂರ್ತಿಯವರಿಗೆ ಡಾಕ್ಟರೇಟ್ ನಿರಾಕರಿಸಲಾಯಿತು ಎಂಬುದು ತಿಳಿದುಬಂದಿಲ್ಲ.
ಬಿಜೆಪಿ ಸರಕಾರದ ಬಗ್ಗೆ ರಾಜ್ಯಪಾಲರ ಧೋರಣೆ ಈಗಾಗಲೇ ರಾಷ್ಟ್ರ ಮಟ್ಟದ ಸುದ್ದಿಯಾಗಿದ್ದು, ಇದೀಗ ಚಿದಾನಂದ ಮೂರ್ತಿಗೆ ಡಾಕ್ಟರೇಟ್ ಅನ್ನು ದಿಢೀರ್ ನಿರಾಕರಿಸಿದ ಸಂಗತಿ ಈ ಸಂಘರ್ಷದ ಬೆಂಕಿಗೆ ತುಪ್ಪ ಸುರಿದಂತಾಗಿದೆ.