ನನ್ನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಹೈಕೋರ್ಟ್ ಸಿಜೆ
ಬೆಂಗಳೂರು, ಬುಧವಾರ, 9 ಫೆಬ್ರವರಿ 2011( 18:57 IST )
NRB
'ನನ್ನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹೈಕೋರ್ಟ್ ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಖೇಹರ್ ಅವರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.
ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಸ್ವಂತ ಕಟ್ಟಡ ಇಲ್ಲದಿರುವ ಬಗ್ಗೆ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ವಕೀಲ ಅಮರನಾಥ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಾಧೀಶ ಖೇಹರ್ ಅವರು, ನಾನು ಮುಖ್ಯ ನ್ಯಾಯಾಧೀಶ ಎಂದು ಹೇಳಿಕೊಳ್ಳಲಿಕ್ಕೆ ನಾಚಿಕೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ನೀಡಿದ ಆದೇಶಗಳಿಗೆ ಸರಕಾರ ಮಾನ್ಯತೆ ಕೊಟ್ಟಿಲ್ಲ. ಅಧಿಕಾರಿಗಳು ನಿದ್ದೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಸರಕಾರದ ಬಳಿ ಹಣ ಇಲ್ಲವಂತೆ, ಕೇಂದ್ರದ ಅನುದಾನ ಸದುಪಯೋಗವಾಗದೆ ವಾಪಸ್ ಹೋಗ್ತಿದೆ. ಆದರೂ ಸರಕಾರ ಎಚ್ಚೆತ್ತುಗೊಳ್ಳುತ್ತಿಲ್ಲ ಎಂದು ಹೇಳಿದರು.
ನಾನು ಅಸಹಾಯಕನಾಗಿರುವೆ ಎಂದು ನೊಂದು ನುಡಿದ ಮುಖ್ಯ ನ್ಯಾಯಾಧೀಶರು, ಮಾರ್ಚ್ 9ರೊಳಗೆ ಉತ್ತರಿಸುವಂತೆ ಸರಕಾರಕ್ಕೆ ಅಂತಿಮ ಸೂಚನೆ ನೀಡಿದರು.