ಭವಿಷ್ಯ ಹೇಳುವ ನೆಪದಲ್ಲಿ ಮಹಿಳೆಯರನ್ನು ತನ್ನ ಮೋಹ ಪಾಶಕ್ಕೆ ಸಿಲುಕಿಸಿಕೊಂಡು ಸುಮಾರು ಆರು ಮಂದಿ ಮಹಿಳೆಯರನ್ನು ವಿವಾಹವಾಗಿ ವಂಚಿಸಿದ್ದ ಜ್ಯೋತಿಷಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಮಂಗಳೂರು ಮೂಲದ ನಿತ್ಯಾಂದ ಶಾಸ್ತ್ರಿ ಅಲಿಯಾಸ್ ನಿತ್ಯಾನಂದ ಶೆಟ್ಟಿ (42) ಎಂಬಾತನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಈತ ಮಂಗಳೂರಿನ ವಸಂತಿ, ಶಕೀಲಾ, ಕಾಸರಗೋಡಿನ ಕೋಮಲೆ, ಚಾರ್ಮುಡಿಯ ಸುಂದರಿ, ಬೆಂಗಳೂರಿನ ಜಯಲಕ್ಷ್ಮಿ ಹಾಗೂ ಮೈಸೂರಿನ ಪವಿತ್ರಾ ಎಂಬುವರನ್ನು ಮದುವೆಯಾಗಿ ವಂಚಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಈ ನಿತ್ಯಾನಂದ ಶಾಸ್ತ್ರಿ ಮಹಿಳೆಯರನ್ನು ನಂಬಿಸಿ ಅವರಿಂದ ಬೇರೆಯವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಅವರಿಗೆ ಸಾಲ ಕೊಡಿಸುವ ನೆಪದಲ್ಲಿ ಪಂಗನಾಮ ಹಾಕುತ್ತಿದ್ದ. ಅಮಾಯಕರಿಗೆ ಲಕ್ಷಾಂತರ ರೂ.ಪಂಗನಾಮ ಹಾಕಿ ಮಂಗಳೂರಿನಿಂದ ಬೆಂಗಳೂರಿಗೆ ಬಂದು, ಕವಡೆ ಹಿಡಿದು ಇಲ್ಲಿಯೂ ಹಲವರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ.
ನಿತ್ಯಾನಂದ ಶಾಸ್ತ್ರಿ ಮೂಲತಃ ಮಂಗಳೂರಿನ ಕೋಡಿಬೈಲು ನಿವಾಸಿ ಜಾರಪ್ಪ ಪೂಜಾರಿ ಎಂಬುವರ ಪುತ್ರ. ಮಂಗಳೂರಿನ ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ಏಳನೇ ತರಗತಿವರೆಗೆ ಕಲಿತಿದ್ದ ಈತ, ನಂತರ ಶಾಲೆ ಬಿಟ್ಟು ಸಹೋದರನ ಜತೆ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ. ಪೋಷಕರು ಮೊದಲು ವಸಂತಿ ಎಂಬಾಕೆ ಜತೆ ಆತನ ಮದುವೆ ಮಾಡಿಸಿದ್ದರು.
ದುಶ್ಚಟಗಳನ್ನು ಮೈಗೂಡಿಸಿಕೊಂಡಿದ್ದ ನಿತ್ಯಾನಂದ ವಿವಾಹವಾದ ಮೂರು ತಿಂಗಳಲ್ಲೇ ಪತ್ನಿಯನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದ. ನಗರದ ಪ್ಯಾಲೇಸ್ ಗುಟ್ಟಳ್ಳಿಯಲ್ಲಿ ವಾಸಿಸುತ್ತಿದ್ದ ಈತ ಮತ್ತೆ ಐವರನ್ನು ವಿವಾಹವಾಗಿದ್ದ. ಕುದುರೆ ರೇಸ್‌ಗೆ ಹಣ ಕಟ್ಟಲು ಜ್ಯೋತಿಷ್ಯ ಹೇಳುವುದನ್ನು ಕಲಿತ ನಿತ್ಯಾನಂದ, ಕಬ್ಬನ್‌ಪಾರ್ಕ್‌ನ ಜ್ಯೋತಿಷಿ ರಂಗರಾಜು ಎಂಬವರ ಬಳಿ ಶಾಸ್ತ್ರ ಹೇಳುವುದನ್ನು ಕಲಿತು ಹಣ ಮಾಡಲು ಆರಂಭಿಸಿದ್ದ. ಈತ ಹತ್ತು ವರ್ಷಗಳಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಹಣ ಸಂಪಾದಿಸಿದ್ದ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.