ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಐತಿಹಾಸಿಕ ಹೆಜ್ಜೆ-1 ಲಕ್ಷ ಕೋಟಿ ರೂ.ಬಜೆಟ್ ಮಂಡನೆ: ಸಿಎಂ (State budget-2011 | BJP | Yeddyurappa | Agriculture budget | Karnataka)
ಐತಿಹಾಸಿಕ ಹೆಜ್ಜೆ-1 ಲಕ್ಷ ಕೋಟಿ ರೂ.ಬಜೆಟ್ ಮಂಡನೆ: ಸಿಎಂ
ಬೆಂಗಳೂರು, ಗುರುವಾರ, 10 ಫೆಬ್ರವರಿ 2011( 17:49 IST )
NRB
ರಾಜ್ಯದ ನ್ಯಾಯಾಲಯಗಳಿಗೆ ಮೂಲಭೂತ ಹಾಗೂ ಕನಿಷ್ಠ ಸೌಲಭ್ಯ ಮಾಡಿಕೊಡದೆ ಇರುವಷ್ಟು ದಾರಿದ್ರ್ಯ ಸರಕಾರಕ್ಕೆ ಬಂದಿದೆಯೇ ಎಂದು ರಾಜ್ಯ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಈ ಬಾರಿ ಒಂದು ಲಕ್ಷ ಕೋಟಿ ಗಾತ್ರದ ಬೃಹತ್ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಆರಂಭವಾದ ಬಿಜೆಪಿಯ ನಿಗಮ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. ಬಜೆಟ್ ಅನುಷ್ಠಾನದಲ್ಲಿ ರಾಜ್ಯ, ದೇಶದದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಬಾರಿ ಒಂದು ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡುವುದಾಗಿಯೂ ಹಾಗೂ ಇದೇ ಮೊದಲ ಬಾರಿಗೆ ಇಡೀ ದೇಶದಲ್ಲೇ ಮಾದರಿಯಾಗುವಂತಹ ಕೃಷಿ ಬಜೆಟ್ ಮಂಡನೆ ಮಾಡುವುದಾಗಿ ಹೇಳಿದರು.
ಎರಡು-ಮೂರು ದಿನಗಳಲ್ಲಿ ಬಜೆಟ್‌ಗೆ ಅಂತಿಮ ಸ್ವರೂಪ ನೀಡಲಾಗುವುದು. ದೇಶದಲ್ಲೇ ಇದು ಒಂದು ಐತಿಹಾಸಿಕ ಬಜೆಟ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಷ್ಟದಲ್ಲಿರುವ ನಿಗಮ ಮಂಡಳಿಗಳ ಪುನಶ್ಚೇತನಕ್ಕೆ ಆರ್ಥಿಕ ಸಹಾಯ ಮಾಡಲು ಬಜೆಟ್‌ನಲ್ಲಿ ಕಾರ್ಯಕ್ರಮಗಳನ್ನು ಹಾಗೂ ಹೊಸ ಯೋಜನೆಗಳನ್ನು ಪ್ರಕಟಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಕೆಲವು ನಿಗಮ ಮಂಡಳಿಗಳು ನಷ್ಟ ಅನುಭವಿಸಲು ಹಿಂದಿನ ಸರಕಾರಗಳೇ ಕಾರಣವಾಗಿದೆ. ಅಧಿಕಾರಿಗಳು ಮತ್ತು ಅಧ್ಯಕ್ಷರು ಹೆಚ್ಚಿನ ಶ್ರಮವಹಿಸಿ ನಿಗಮ ಮಂಡಳಿಗಳು ಲಾಭದಾಯಕವಾಗಿ ನಡೆಯುವಂತೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
24ರಂದು ಕೃಷಿ ಇಲಾಖೆಯ ಬಜೆಟ್ ಅನ್ನು ಆದ್ಯತೆ ಮೇಲೆ ಮೊದಲು ಮಂಡನೆ ಮಾಡಿ, ಆನಂತರ ಉಳಿದ ಇಲಾಖೆಯ ಬಜೆಟ್ ಮಂಡನೆ ಮಾಡುವುದಾಗಿ ಅವರು ಸ್ಪಷ್ಟಪಡಿಸಿದರು. ಕೃಷಿ ಬಜೆಟ್‌ಗೆ ಪ್ರತ್ಯೇಕ ದಿನಾಂಕ ನಿಗದಿಯಿಲ್ಲ. ಕೃಷಿ ಬಜೆಟ್ ಹಾಗೂ ಇತರ ಇಲಾಖೆಗಳ ಬಜೆಟ್ ಒಂದೇ ದಿನ ಮಂಡನೆ ಆಗಲಿದೆ ಎಂದರು.