ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅವ್ಯವಹಾರ: ಉಪಸಭಾಪತಿ ರೆಹಮಾನ್ ಖಾನ್ ವಿರುದ್ಧ ಕೇಸ್ (Rehaman Khan | Dy speakar | Amanath bank | Case | Rajya sabha)
PR
ಅಮಾನತ್ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಉಪಸಭಾಪತಿಯಾಗಿರುವ ಕೆ.ರೆಹಮಾನ್ ಖಾನ್ ವಿರುದ್ಧ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಹಕಾರಿ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

102 ಕೋಟಿ ರೂ.ಅವ್ಯವಹಾರ: ಹಾಲಿ ರಾಜ್ಯಸಭೆ ಉಪಸಭಾಪತಿಯಾಗಿರುವ ರೆಹಮಾನ್ ಖಾನ್ ಅವರು 1989-2002ರವರೆಗೆ ಅಮಾನತ್ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಯಾವುದೇ ಭದ್ರತೆ ಇಲ್ಲದೆ ಸಾಲ ಮಂಜೂರು ಮಾಡುವ ಮೂಲಕ ಸುಮಾರು 102 ಕೋಟಿ ರೂಪಾಯಿ ಅವ್ಯವಹಾರ ನಡೆಸಿರುವುದಾಗಿ ಸವದಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ರೆಹಮಾನ್ ಖಾನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಂಬಂಧಿಗಳಿಗೆ, ನಿರ್ದೇಶಕ ಮಂಡಳಿಯ ಕೆಲವು ಸದಸ್ಯರಿಗೆ ಹಾಗೂ 165 ಜನ ಸಿಬ್ಬಂದಿಗಳಿಗೆ 15 ಕೋಟಿ ರೂಪಾಯಿ ಸಾಲ ನೀಡಿದ್ದರು. ಅಷ್ಟೇ ಅಲ್ಲ ಸುಮಾರು 48 ಬೇನಾಮಿ ಜನರಿಗೆ ಸಾಲವನ್ನು ನೀಡಿದ್ದರು. ಇದರಿಂದಾಗಿ ಬ್ಯಾಂಕ್‌ನಲ್ಲಿ ಸುಮಾರು 102 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಇಲಾಖಾ ಅಧಿಕಾರಿಗಳು ತನಿಖೆ ನಡೆಸಿದ್ದು, ಆ ಬಗ್ಗೆ ಪೂರ್ಣ ವಿವರ ಲಭ್ಯವಾಗಿದೆ. ಆ ಹಿನ್ನೆಲೆಯಲ್ಲಿ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ರೆಹಮಾನ್ ಖಾನ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು. ಇದರ ಪೂರ್ಣ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಹುನ್ನಾರ-ಖಾನ್:
ಅಮಾನತ್ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಗೊತ್ತಾಗಿದ್ದೆ ನನಗೆ ಮಾಧ್ಯಮಗಳಿಂದ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು 2002ರ ಆಗೋಸ್ಟ್ ತಿಂಗಳಿನಲ್ಲೇ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ನಿಟ್ಟಿನಲ್ಲಿ ನನ್ನ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ರೆಹಮಾನ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಮಾನತ್ ಬ್ಯಾಂಕ್ ಸಿಇಒಗೆ ರಾಜಕೀಯ ನಂಟು ಇರುವುದಾಗಿಯೂ ಹೇಳಿದ ಅವರು ಇದು ರಾಜಕೀಯ ಪ್ರೇರಿತ ಆರೋಪ ಎಂದು ಹೇಳಿದರು.
ಇವನ್ನೂ ಓದಿ