ಜೆಡಿಎಸ್ ದೊಡ್ಡ ಜೋಕರ್ ಪಕ್ಷ: ಕೆ.ಎಸ್.ಪುಟ್ಟಣ್ಣಯ್ಯ ವ್ಯಂಗ್ಯ
ಮಂಡ್ಯ, ಶನಿವಾರ, 12 ಫೆಬ್ರವರಿ 2011( 19:50 IST )
ಜಾತ್ಯಾತೀತ ಜನತಾ ದಳ (ಜೆಡಿಎಸ್) ಒಂದು ಜೋಕರ್ ಪಕ್ಷವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಲೇವಡಿ ಮಾಡಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮತ್ತೆ ಕೂಡುವಳಿ ಮಾಡಿಕೊಂಡು ಮೈತ್ರಿ ಏರ್ಪಡಿಸಿ ಅಧಿಕಾರಕ್ಕೆ ಏರುವ ಮೂಲಕ ತಾನು ಅಧಿಕಾರಕ್ಕಾಗಿ ಯಾವ ಪಕ್ಷದೊಂದಿಗಾದರೂ ಸೇರಬಲ್ಲ ಜೋಕರ್ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷಕ್ಕೆ ರಾಜಕೀಯ ಸಿದ್ದಾಂತ ಇಲ್ಲವಾಗಿದೆ. ಆದರೆ ಮೇಲ್ನೋಟಕ್ಕೆ ಅದರ ನಾಯಕರು ನಾಟಕವಾಡುತ್ತಾರೆ. ಇಂಥವರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಜನ ಯಾವುದೇ ರಾಜಕೀಯ ಪಕ್ಷವನ್ನೂ ಸೇರಬಾರದು. ಚುನಾವಣೆ ಸಂದರ್ಭದಲ್ಲಿ ಒಳ್ಳೆಯವರಿಗೆ ಮಾತ್ರ ಮತ ಹಾಕಬೇಕು ಎಂದು ಪುಟ್ಟಣ್ಣಯ್ಯ ಮನವಿ ಮಾಡಿದರು.
ರಾಜ್ಯ ರಾಜಕೀಯದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರುವ ಜೆಡಿಎಸ್ ವರಿಷ್ಠರು, ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ ಜತೆಯೇ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದಾರೆ. ಆದರೆ ಜೆಡಿಎಸ್ ಬಿಜೆಪಿ ಜತೆಗಿನ ಮೈತ್ರಿಯನ್ನು ಸಮರ್ಥಿಸಿಕೊಂಡಿದೆ. ಇದರಿಂದಾಗಿ ಜೆಡಿಎಸ್‌ನ ಡೋಂಗಿ ಜಾತ್ಯತೀತ ಮುಖವಾಡ ಬಯಲಾಗಿದೆ ಎಂದರು.