ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣೆ ಸಂದರ್ಭದ ಮತದಾನದ ಮುಂಚಿನ 48ಗಂಟೆಗಳ ಅವಧಿಯಲ್ಲಿ ಮನೆ,ಮನೆಗೆ ತೆರಳಿ ಮತ ಯಾಚಿಸುವುದು ಸೇರಿದಂತೆ ಎಲ್ಲ ಬಗೆಯ ಪ್ರಚಾರವನ್ನು ನಿಷೇಧಿಸಲು ಕೇಂದ್ರ ಚುನಾವಣಾ ಆಯೋಗ ಮಹತ್ವದ ಹೆಜ್ಜೆಯಿಟ್ಟಿದೆ.
ಕೇಂದ್ರ ಕಾನೂನು ಸಚಿವಾಲಯ ಮತ್ತು ಕೇಂದ್ರ ಚುನಾವಣಾ ಆಯೋಗ ಜಂಟಿಯಾಗಿ ಆಯೋಜಿಸಿದ್ದ ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ಕುರಿತ ಪ್ರಾದೇಶಿಕ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಈ ಬಗ್ಗೆ ಮಾಹಿತಿ ನೀಡಿದರು.
ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಕಾನೂನುಗಳ ಪ್ರಕಾರ ಮತದಾನಕ್ಕೂ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರವನ್ನು ಮಾತ್ರ ನಿಷೇಧಿಸಲಾಗುತ್ತದೆ. ಆದರೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆಮನೆಗೆ ತೆರಳಿ ಮತಯಾಚಿಸಲು ಅವಕಾಶ ಇದೆ. ಈ ಸಂದರ್ಭದಲ್ಲಿ ಮತದಾರರಿಗೆ ಹಣ, ಹೆಂಡ ವಿತರಿಸಿ ಆಮಿಷ ಒಡ್ಡುತ್ತಿರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ-ಮನೆ ಪ್ರಚಾರವನ್ನೂ ನಿಷೇಧಿಸಲು ಆಯೋಗ ಮುಂದಾಗಿದೆ.
ಮತದಾರರು ಯಾವುದೇ ಪೂರ್ವಗ್ರಹ ಇಲ್ಲದೇ ಮತ ಚಲಾಯಿಸುವ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕಾಗಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳಾಗಲೀ, ಅವರ ಬೆಂಬಲಿಗರಾಗಲೀ ಮತದಾರರನ್ನು ಸಂಪರ್ಕಿದಂತೆ ನಿಷೇಧ ಹೇರಲು ಚಿಂತನೆ ನಡೆದಿದೆ. ಮತದಾನಕ್ಕೂ ಮುನ್ನ ಮತದಾರರಿಗೆ ಆಮಿಷ ಒಡ್ಡಲು ಅವಕಾಶ ಇಲ್ಲದಿದ್ದರೆ ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.