ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೊರಬೀಳಲಿದೆ ಅನರ್ಹ ಶಾಸಕರ ತೀರ್ಪು; ಸರಕಾರಕ್ಕೆ ಕಂಟಕವೇ? (High court | Indipendent MLA | BJP, Congress, Yeddyurappa)
NRB
ರಾಜ್ಯರಾಜಕಾರಣದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ, ಅನರ್ಹ ಐವರು ಪಕ್ಷೇತರ ಶಾಸಕರ ರಾಜಕೀಯ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ.

ತೀರ್ಪು ಸರಕಾರಕ್ಕೆ ಕಂಟಕವಾಗಲಿದೆಯೇ?
ಪಕ್ಷೇತರ ಶಾಸಕರ ಅನರ್ಹತೆಯನ್ನು ಕೋರ್ಟ್ ಎತ್ತಿಹಿಡಿದರೆ ಅವರ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ. ಆದರೆ ಸ್ಪೀಕರ್ ಆದೇಶವನ್ನು ಕೋರ್ಟ್ ರದ್ದುಗೊಳಿಸಿದರೂ ಕೂಡ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಯಾಕೆಂದರೆ ಆಡಳಿತರೂಢ ಬಿಜೆಪಿ ಸರಕಾರ ಈಗಾಗಲೇ ಬಹುಮತ ಹೊಂದಿದೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಸಕ್ತವಾಗಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಹೊರತುಪಡಿಸಿ ಇರುವ ಸದಸ್ಯರ ಸಂಖ್ಯೆ 205 ಮಾತ್ರ. ಕಳೆದ ಅಕ್ಟೋಬರ್‌ನಲ್ಲಿ ಯಡಿಯೂರಪ್ಪ ವಿಶ್ವಾಸಮತ ಯಾಚಿಸಿದ ನಂತರ ಜೆಡಿಎಸ್‌ನ ಒಬ್ಬ ಶಾಸಕ ಮತ್ತು ಕಾಂಗ್ರೆಸ್ ಪಾಳಯದಿಂದ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಬಲ 71ಕ್ಕೆ ಮತ್ತು ಜೆಡಿಎಸ್ ಬಲ 27ಕ್ಕೆ ಕುಸಿದಿದೆ. ಒಬ್ಬ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಇದ್ದಾರೆ.

ಇದಕ್ಕೆ ನಾಮ ನಿರ್ದೇಶನಗೊಂಡ ಸದಸ್ಯರ ಸಂಖ್ಯೆ ಸೇರಿದರೆ ವಿಧಾನಸಭೆಯ ಈಗಿನ ಬಲಾಬಲ 206 ಆಗುತ್ತದೆ. ಆಗ ಬಿಜೆಪಿ ಸದಸ್ಯರ ಸಂಖ್ಯೆ 106ಕ್ಕೆ ಏರುತ್ತದೆ. ಹೀಗಾಗಿ ಐವರು ಪಕ್ಷೇತರ ಶಾಸಕರ ಅನರ್ಹತೆ ರದ್ದುಗೊಂಡರೂ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಈ ಐವರು ಸೇರಿಕೊಂಡರೂ ಕೂಡ ವಿಧಾನಸಭೆಯ ಒಟ್ಟು ಬಲಾಬಲ 211 ಆಗುತ್ತದೆ.

ಆ ನೆಲೆಯಲ್ಲಿ ಬಿಜೆಪಿ ಅರ್ಧಕ್ಕಿಂತ (106) ಹೆಚ್ಚು ಬಲ ಹೊಂದಿದೆ. ಅಲ್ಲದೇ ಎರಡೂ ಕಡೆ ಸಮಾನ ಮತಗಳು ಬಂದ ಸಂದರ್ಭದಲ್ಲಿ ಸ್ಪೀಕರ್ ತಮ್ಮ ಮತ ಚಲಾಯಿಸಲು ಅವಕಾಶ ಇದೆ. ಪಕ್ಷೇತರ ಶಾಸಕ ವರ್ತೂರು ಈಗಾಗಲೇ ಸರಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಇದರಿಂದಾಗಿ ಪಕ್ಷೇತರ ಶಾಸಕರ ಅನರ್ಹತೆ ಕುರಿತು ಯಾವುದೇ ತೀರ್ಪು ಬಂದರೂ ಸರಕಾರ ಸೇಫ್ ಆಗಲಿದೆ.

ಪಕ್ಷೇತರ ಸ್ಥಿತಿ ಏನಾಗಲಿದೆ?
ಒಂದು ವೇಳೆ ಪಕ್ಷೇತರ ಶಾಸಕರ ಅನರ್ಹತೆಯನ್ನು ಹೈಕೋರ್ಟ್ ಎತ್ತಿಹಿಡಿದರೆ ಅವರು ಮುಂದಿನ ಆರು ವರ್ಷಗಳ ಕಾಲ ವಿಧಾನಸಭೆಗೆ ಸ್ಪರ್ಧಿಸುವಂತಿಲ್ಲ. ಅಷ್ಟೇ ಅಲ್ಲ, ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಪಕ್ಷೇತರರು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದಾಗಿದೆ.

ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಶಿವರಾಜ್ ತಂಗಡಗಿ, ಪಿ.ಎಂ.ನರೇಂದ್ರ ಸ್ವಾಮಿ, ವೆಂಕಟರಮಣಪ್ಪ ಮತ್ತು ಡಿ.ಸುಧಾಕರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ.ಮೋಹನ ಶಾಂತನಗೌಡರ್, ನ್ಯಾ.ಅಬ್ದುಲ್ ನಜೀರ್ ಮತ್ತು ನ್ಯಾ.ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠ ಫೆ.1ರಂದು ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಸಂಜೆ ಪ್ರಕಟಿಸಲಿದೆ.

ನ್ಯಾಯ ದೇವತೆ ನಮ್ಮ ಪರ-ಶಿವರಾಜ್ ತಂಗಡಗಿ: ತೀರ್ಪು ಏನೇ ಬಂದರೂ ಸ್ವಾಗತ ಮಾಡುತ್ತೇವೆ. ತೀರ್ಪು ನಮ್ಮ ಪರ ಬರಬಹುದು ಎಂಬ ವಿಶ್ವಾಸ ಇದೆ. ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದೇವು. ನಾವು ನಿಜವಾಗಲೂ ಅನಾಥ ಮಕ್ಕಳು, ಹಾಗಾಗಿ ನಮಗೆ ದೇವರು ಮತ್ತು ನ್ಯಾಯ ದೇವತೆ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಂಬ ನಂಬಿಕೆ ಇರುವುದಾಗಿ ಅನರ್ಹ ಶಾಸಕರಲ್ಲಿ ಒಬ್ಬರಾದ ಶಿವರಾಜ್ ತಂಗಡಗಿ ಹೇಳಿದರು.
ಇವನ್ನೂ ಓದಿ