ಆಡಳಿತಾರೂಢ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವಿಪಕ್ಷಗಳು ಅನಾವಶ್ಯಕವಾಗಿ ಆರೋಪ ಹೊರಿಸುತ್ತಿವೆ. ಅದೇ ರೀತಿ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಂದಿದೆ ಎಂದು ಹೇಳುವ ಮೂಲಕ ಜನರಲ್ಲಿ ಹುಬ್ಬೇರಿಸುವಂತೆ ಮಾಡಿದವರು ಬೇರಾರು ಅಲ್ಲ ಸ್ವತಃ ಆರೋಗ್ಯ ಸಚಿವರಾಗಿರುವ ಬಿ.ಶ್ರೀರಾಮುಲು!.
ಇತ್ತೀಚೆಗಷ್ಟೇ ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಪೋರ್ಚುಗೀಸ್ ದೇಶದ ವಿದೇಶಾಂಗ ಮಂತ್ರಿಯ ಭಾಷಣವನ್ನು ಓದಿ ಇಕ್ಕಟ್ಟಿಗೆ ಸಿಲುಕಿದ ಘಟನೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಹಾವೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಲ್ಲದೆ, ಸರಕಾರ ಮತ್ತು ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದರು.
ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತ, ಅಭಿವೃದ್ದಿ, ಭ್ರಷ್ಟಾಚಾರದ ಲ್ಲೂ ಮುಂದು ಎಂದರು. ಈ ಮಾತನ್ನು ಕೇಳಿ ವೇದಿಕೆ ಮೇಲಿದ್ದವರು ಕೂಡ ಅಚ್ಚರಿಗೊಳಗಾದರು. ಬಳಿಕ ಸಚಿವರೇ ಸ್ಪಷ್ಟನೆ ನೀಡುತ್ತ, ಬಾಯ್ತಪ್ಪಿನಿಂದಾಗಿ ಈ ರೀತಿ ಆಗಿದೆ. ಅಭಿವೃದ್ಧಿಯಲ್ಲಿ ನಾವು ನಂಬರ್ 1 ಎಂಬ ವಿಚಾರ ಹೇಳುತ್ತಿರುವಾಗ, ಭ್ರಷ್ಟಾಚಾರ ಸೇರಿಕೊಂಡಿತು ಎಂದರು.