ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ: ಗೌಡರ ಸ್ಪಷ್ಟ ನುಡಿ
ಬೆಂಗಳೂರು, ಗುರುವಾರ, 17 ಫೆಬ್ರವರಿ 2011( 09:43 IST )
ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಹಿರಿಯ ಸಾಹಿತಿ ದೇಜಗೌರವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗೌಡರು, ಗ್ರಾಮೀಣ ಪ್ರದೇಶದ ಜನರ ಸ್ಥಿತಿ ಸುಧಾರಣೆಯಾಗದ ಹೊರತು ರಾಜಕೀಯದಿಂದ ಸನ್ಯಾಸ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಬಹುತೇಕ ಮಂದಿಗೆ ನಾನು ರಾಜಕೀಯಕ್ಕೆ ನಿವೃತ್ತಿ ಹೊಂದುವುದಿಲ್ಲ ಎಂಬುದು ಪ್ರಶ್ನೆಯಾಗಿ ಮೂಡಿದೆ. ಆದರೆ ಕಿರಿಯರಿಗೆ ನನ್ನ ಮಾರ್ಗದರ್ಶನ ಅಗತ್ಯವಿರುವುದರಿಂದ ರಾಜಕೀಯ ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಳ್ಳಿಗರ ಬದುಕು ಇಂದಿಗೂ ಶೋಚನಿಯವಾಗಿದೆ. ಗ್ರಾಮೀಣ ಪ್ರದೇಶದ ಬೆಳವಣಿಗೆ ಶೇಕಡಾ 10ರಷ್ಟು ಸುಧಾರಿಸಿರಬಹದು. ಆದರೆ ಶೇಕಡಾ 90ರಷ್ಟು ಜನರ ಬದುಕು ಶೋಚನಿಯವಾಗಿಯೇ ಇದೆ. ಹೀಗಾಗಿ ರೈತರ ಅಭಿವೃದ್ಧಿಗಾಗಿ ರಾಜಕೀಯದಲ್ಲಿ ಉಳಿದಿದ್ದೇನೆ ಎಂದರು.
ದೇಶದ ರೈತರಿಗೆ ರಾಜಕಾರಿಣಗಳು ಏನೇ ಮಾಡಿದರೂ ಅದು ಅವರ ಕರ್ತವ್ಯವಾಗಿರುತ್ತದೆ. ಹಾಗಾಗಿ ಇದನ್ನು ಉಪಕಾರವೆಂದು ಬಣ್ಣಿಸುವುದರಲ್ಲಿ ಅರ್ಥವಿಲ್ಲ ಎಂದವರು ತಿಳಿಸಿದರು.
ಕರ್ನಾಟಕದಲ್ಲಿ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ ಗೌಡರು, ರಾಜ್ಯವೂ ಇತ್ತೀಚಿನ ದಿನಗಳಲ್ಲಿ ತನ್ನ ವರ್ತನೆ ಹಾಗೂ ನಡವಳಿಕೆಯಿಂದ ಘನತೆ ಕಳೆದುಕೊಳ್ಳುತ್ತಿದೆ ಎಂದರು.
ಕರ್ನಾಟಕದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಜತೆಗೆ ಸಂಸ್ಕೃತ್ತಿ ಬೆಳವಣಿಗೆಗೂ ಪ್ರಯತ್ನಿಸಬೇಕು. ಹೀಗೆ ಆಗಬೇಕಾದರೆ ವಿವಿಧ ವಿಭಾಗಗಳಾಗಿ ಮಾಡುವ ಪ್ರಾದೇಶಿಕ ಭಾವನೆ ಕನ್ನಡಿಗರಲ್ಲಿ ಮೂಡಬಾರದು. ಕನ್ನಡಿಗರಾದ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಿದೇಶಯಾನಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಧಿರಿಸು ಬದಲಾವಣೆ ಮಾಡಿರುವುದನ್ನು ಗೌಡರು ಪರೋಕ್ಷವಾಗಿ ಪ್ರಸ್ತಾಪಿಸಿದರು. ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಬಾರಿ ವಿದೇಶಗಳಿಗೆ ಹೋಗಿ ಬಂದಿದ್ದೇನೆ. ಆದರೆ ಎಂದಿಗೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಈಗಿರುವಂತಹ ಧಿರಿಸಿನಲ್ಲಿಯೇ ಹೊರ ದೇಶಕ್ಕೆ ಹೋಗಿ ಬಂದಿದ್ದೇನೆ. ನನ್ನ ವೇಷಭೂಷಣ ಕಂಡು ವಿದೇಶಿಯರಲ್ಲಿ ಬೇರೆ ಭಾವನೆ ಮೂಡಿರಲಿಲ್ಲ ಎಂದು ಹೇಳಿದರು.