ಯಾವುದೇ ಕಾರಣಕ್ಕೂ ಅನ್ನ ಕೊಡುವ ಸ್ವಾಭಿಮಾನಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಆತ್ಮಹತ್ಯೆ ಆಲೋಚನೆಯನ್ನೂ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಗುರುವಾರ ನಡೆದ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಬದುಕು ಬಂಗಾರ ಆಗಬೇಕು ಎಂಬ ಕಾರಣಕ್ಕಾಗಿಯೇ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕೃಷಿಕರು ಮೆಚ್ಚುವಂತಹ ಬಜೆಟ್ ಕೊಡುತ್ತೇನೆ ಎಂದರು.
ಅನ್ನ ಹಾಕುವ ರೈತ ಆತ್ಮಹತ್ಯೆ ಮಾಡಿಕೊಂಡರೆ ಹೊಟ್ಟೆ ಉರಿಯುತ್ತದೆ. ಬೇಕಾದರೆ ಕಳ್ಳರು, ಸುಳ್ಳರು, ದಗಾಕೋರರು ಆತ್ಮಹತ್ಯೆ ಮಾಡಿಕೊಳ್ಳಲಿ. ಆದರೆ, ದೇಶಕ್ಕೆ ಅನ್ನ ಕೊಡುವ ಅನ್ನದಾತ ಮಾತ್ರ ಆತ್ಮಹತ್ಯೆಯಂತಹ ವಿಚಾರಗಳನ್ನು ಕನಸು ಮನಸಿನಲ್ಲಿಯೂ ಮಾಡಬಾರದು.
ಈ ಬಾರಿ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಅನ್ನು ಮಂಡಿಸುತ್ತಿದ್ದೇನೆ. ನನ್ನ ವಿರೋಧಿಗಳೂ ಮೆಚ್ಚುವಂತಹ ಬಜೆಟ್ ಕೊಡುತ್ತೇನೆ. ಒಟ್ಟಾರೆ ರೈತರು ಸ್ವಾವಲಂಬಿ ಬದುಕು ಬಾಳಬೇಕು. ರೈತರ ಬೆಳೆಗೆ ಉತ್ತಮ ಮತ್ತು ವೈಜ್ಞಾನಿಕ ಬೆಲೆ ಸಿಗಬೇಕು. ಕೃಷಿ ಲಾಭದಾಯಕವಾಗಿ ಇರಬೇಕು. ಸಾವಯವ ಕೃಷಿಗೆ ಹೆಚ್ಚಿನ ಒತ್ತು ಕೊಡಬೇಕು ಎಂಬುದೇ ನನ್ನ ಸರಕಾರದ ಆದ್ಯತೆಯಾಗಿದೆ ಎಂದರು.