ಕಾಂಗ್ರೆಸ್, ಜೆಡಿಎಸ್ ಮುಖಂಡರು ಪಕ್ಷ ಸಂಘಟನೆ ಮಾಡುವತ್ತ ಗಮನ ಹರಿಸಲಿ. ನಾವು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಅದೇ ರೀತಿ ಇನ್ನು 25-30 ವರ್ಷ ವಿಪಕ್ಷಗಳಿಗೆ ಅಧಿಕಾರದ ಗದ್ದುಗೆ ಏರುವ ಅವಕಾಶ ಇಲ್ಲ. ತಾವು ಅಂಗಡಿ ಬಾಗಿಲು ಹಾಕಿಕೊಂಡು ಹೋಗಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಮಿಕವಾಗಿ ನುಡಿಯುವ ಮೂಲಕ ಕಾಂಗ್ರೆಸ್,ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಶುಕ್ರವಾರ ಅರಮನೆ ಮೈದಾನದಲ್ಲಿ ಭಾನುವಾರ ನಡೆಯಲಿರುವ ಬೃಹತ್ ಸಮಾವೇಶದ ಸಿದ್ದತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,ಯುಪಿಎ ಸರಕಾರ ಭ್ರಷ್ಟಾಚಾರದಿಂದ ತಲೆತಗ್ಗಿಸುವಂತೆ ಮಾಡಿದೆ. ಹಾಗಾಗಿ ದೇಶದ ರಾಜಕೀಯ ಹೊಸ ತಿರುವು ಪಡೆಯುತ್ತಿದೆ ಎಂದರು.
ಸರಕಾರಕ್ಕೆ ಯಾವುದೇ ಹಣಕಾಸಿನ ಮುಗ್ಗಟ್ಟಿಲ್ಲ. ನಾವೇ ನಂ.1 ಎಂದ ಅವರು, ವಿಪಕ್ಷ ಮುಖಂಡರು ರಸ್ತೆಯಲ್ಲಿ ಬಾಯಿಗೆ ಬಂದಂತೆ ಮಾತನಾಡೋದು ಬೇಡ. ತಾಕತ್ತಿದ್ದರೆ ಅಧಿವೇಶನದಲ್ಲಿ ಮಾತನಾಡಿ ಎಂದು ಬಹಿರಂಗವಾಗಿ ಪಂಥಾಹ್ವಾನ ನೀಡಿದರು.
ನಾನು ಬದುಕಬೇಕೆಂದು ಆಸೆ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಇತ್ತೀಚೆಗಿನ ರಾಜಕಾರಣದಲ್ಲಿ ಸ್ವಾರ್ಥ, ಅಸೂಯೆ ಹೆಚ್ಚಾಗುತ್ತಿದೆ. ಇನ್ನೊಬ್ಬರನ್ನು ಬಲಿ ತೆಗೆದುಕೊಳ್ಳುವ ರಾಜಕಾರಣ ಕೊನೆಯಾಗಬೇಕು ಎಂದು ಮನವಿ ಮಾಡಿಕೊಂಡರು.
ಬಜೆಟ್ ನಂತ್ರ ಬದಲಾಗ್ತೀನಿ: ಫೆಬ್ರುವರಿ 24ರಂದು ವಿಪಕ್ಷಗಳು ಟೀಕೆ ಮಾಡಲು ಅವಕಾಶವೇ ಇಲ್ಲದಂತಹ ಬಜೆಟ್ ಮಂಡಿಸ್ತೇನೆ. ಇದು ರೈತ ಹಾಗೂ ಜನಸಾಮಾನ್ಯರ ಪರವಾದ ಬಜೆಟ್. ಅಷ್ಟೇ ಅಲ್ಲ ಬಜೆಟ್ ಮಂಡನೆ ನಂತರ ನಾನು ಬದಲಾಗ್ತೀನಿ ಎಂದು ಮತ್ತೊಮ್ಮೆ ಪುನರುಚ್ಚರಿಸಿದ ಅವರು, ನನ್ನ ರೀತಿ ನೀತಿ ಬದಲಾಗಲಿದೆ. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ. ರಾಜ್ಯದ ಅಭಿವೃದ್ಧಿಗೆ ಗಮನ ನೀಡುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.