ಬಿಜೆಪಿ ಸರಕಾರ ಆರ್ಥಿಕ ದಿವಾಳಿತನ ಎದುರಿಸುತ್ತಿದೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ರಾಜ್ಯ ಬಜೆಟ್ ಮಂಡನೆಗೂ ಮುನ್ನ ಸರಕಾರದ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.
ಆರ್ಥಿಕ ದಿವಾಳಿತನದ ಬಗ್ಗೆ ಸರಕಾರಿ ದಾಖಲೆಗಳು ಹೇಳುತ್ತಿವೆ. ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾದ ಯೋಜನೆಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾವು ಬುರುಡೆ ಬಿಡುತ್ತಿಲ್ಲ ದಾಖಲೆಗಳನ್ನು ಆಧರಿಸಿ ಈ ಆರೋಪ ಮಾಡುತ್ತಿರುವುದಾಗಿ ಹೇಳಿದರು. 2008-09, 2009-10ನೇ ಸಾಲಿನ ಬಜೆಟ್‌ನಲ್ಲಿ ಕೃಷಿ, ನೀರಾವರಿ ಮತ್ತಿತರ ವಲಯಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಅಭಿವೃದ್ಧಿ ಶೇ.33ರಷ್ಟಿದ್ದರೆ ಈ ಪ್ರಮಾಣವನ್ನು ಹೆಚ್ಚು ಮಾಡಲು ಯಾವುದೇ ರೀತಿಯ ಕಾರ್ಯಕ್ರಮ ಹಾಕಿಕೊಂಡಿಲ್ಲ. ಆದರೆ ಲಕ್ಷ, ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ವಾಸ್ತವ ಸ್ಥಿತಿಗೂ ಇವರ ಹೇಳಿಕೆಗೂ ಒಂದಕ್ಕೊಂದು ಹೋಲಿಕೆ ಇಲ್ಲ ಎಂದರು.