ಬಜೆಟ್ ನಂತರ ತಾನು ಬದಲಾಗ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾಯಿಯ ಡೊಂಕು ಬಾಲವನ್ನು ನೀವು ಏನೇ ಮಾಡಿದರು ನೆಟ್ಟಗೆ ಮಾಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ತಾನು ಬದಲಾಗ್ತೇನೆ, ನಡವಳಿಕೆ ಸರಿ ಮಾಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಹಲವು ಬಾರಿ ಬಹಿರಂಗವಾಗಿ ಹೇಳಿದ್ದರೂ ಸಹ, ಈವರೆಗೂ ಯಾವುದೇ ಬದಲಾವಣೆ ಆಗಿಲ್ಲ. ಅವರ ನಡವಳಿಕೆ ಬದಲಾವಣೆ ಹೇಳಿಕೆ ಹಾಸ್ಯಾಸ್ಪದ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಡವಳಿಕೆಯನ್ನು ಬ್ರಹ್ಮ ಮತ್ತೆ ಬಂದರೂ ಸರಿ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಅಲ್ಲದೇ ರಾಜ್ಯದಿಂದ ರಾಜ್ಯಸಭೆಗೆ ನಟಿ ಹೇಮಾ ಮಾಲಿನಿಯವರನ್ನು ಬಿಜೆಪಿ ವರಿಷ್ಠರು ಕಣಕ್ಕಿಳಿಸಲು ನಿರ್ಧರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಯಾವ ನಟರೂ, ಅಭ್ಯರ್ಥಿಗಳು ಬಿಜೆಪಿಯವರಿಗೆ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಮುಖಂಡರು ಮತ್ತು ಮುಖ್ಯಮಂತ್ರಿ ಯಾವ ರೀತಿ ಸಂಘ ಪರಿವಾರದ ಕೈಗೊಂಬೆಯಾಗಿದ್ದಾರೆ ಹಾಗೂ ನ್ಯಾಯಾಲಯಗಳಲ್ಲಿ ಕೇಸ್‌ಗಳನ್ನು ಯಾವ ರೀತಿ ಮುಚ್ಚಿಹಾಕಿದ್ದಾರೆ ಎಂಬ ಬಗ್ಗೆ ಸೋಮವಾರ ದಾಖಲೆ ಸಹಿತ ಬಹಿರಂಗಗೊಳಿಸುವುದಾಗಿ ಹೇಳಿದರು.
ಸೋಮವಾರ ಲೋಕಸಭೆಯಲ್ಲಿ ಅಧಿವೇಶನ ಪ್ರಾರಂಭವಾಗುತ್ತಿದ್ದು, ತಾನು ಕಲಾಪದಲ್ಲಿ ಪಾಲ್ಗೊಳ್ಳದೆ ಬಿಜೆಪಿ ಮುಖಂಡರ ಗೋಮುಖ ವ್ಯಾಘ್ರತನದ ಮುಖವಾಡವನ್ನು ಬಯಲು ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.