ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡ ಐದು ಲಕ್ಷ ಗಿಡ ನೆಡುವ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ರಾಜಧಾನಿ ಬೆಂಗಳೂರನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಲು ರೂಪಿಸಿದ್ದ ಹಸಿರು ಬೆಂಗಳೂರು ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲ ಗಿಡ ನೆಟ್ಟಿರುವ ಬಡಾವಣೆಗಳ ವಿಳಾಸ ಹುಡುಕಿಕೊಂಡು ಹೋದರೆ ಅಲ್ಲಿ ಗಿಡಗಳೇ ಇಲ್ಲ. ಇನ್ನೂ ವಿಚಿತ್ರವೆಂದರೆ ಬೆಂಗಳೂರಿನಲ್ಲಿ ಇಲ್ಲದ ಬಡಾವಣೆಗಳ ಹೆಸರು ಸೃಷ್ಟಿಸಿ ಗಿಡಗಳನ್ನು ನೆಟ್ಟಿರುವ ಲೆಕ್ಕ ತೋರಿಸಲಾಗಿದೆ. ಪಾಲಿಕೆಯ ಎಂಟೂ ವಲಯಗಳಲ್ಲಿ ಮೂರೂವರೆ ಲಕ್ಷ ಗಿಡಗಳನ್ನು ನೆಟ್ಟಿರುವ ಲೆಕ್ಕ ತೋರಿಸಲಾಗುತ್ತಿದೆ. ಆದರೆ ಗಿಡಗಳು ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.
ಪಾಲಿಕೆಗೆ ನಿಯೋಜನೆ ಮೇರೆಗೆ ಬಂದಿರುವ ಕೆಲವು ಅರಣ್ಯ ಸಂರಕ್ಷಣಾಧಿಕಾರಿಗಳ ಪಾಲಿಗೆ ಹಸಿರು ಬೆಂಗಳೂರು ಯೋಜನೆ ಬರೇ ಹಣ ಗುಳುಂ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.