'ನಿಮ್ಮ ಮಗಳನ್ನು ಮನಸಾರೆ ಪ್ರೀತಿಸಿದ್ದೇನೆ. ಮದುವೆ ಮಾಡಿಕೊಡಿ' ಎಂದು ಹುಡುಗಿಯ ಹೆತ್ತವರನ್ನು ಹುಡುಗ ಕೇಳಿದ್ದಕ್ಕೆ ಕೆರಳಿದ ಹುಡುಗಿಯ ಅಣ್ಣ ಹುಡುಗನನ್ನು ಬರ್ಬರವಾಗಿ ಕೊಂದು ಹಾಕಿದ ಭೀಕರ ಘಟನೆ ಹೊಸಕೋಟೆ ಬಳಿ ನಡೆದಿದೆ.
ಆಟೋ ಚಾಲಕನಾಗಿದ್ದ ಸುಲ್ತಾನ್ (25) ಎಂಬಾತ ಸಾಹಿದಾ ಎಂಬಾಕೆಯನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ಸಂಗತಿ ಹುಡುಗಿಯ ಅಣ್ಣ ಆಸಿಫ್ ಕಿವಿಗೆ ತಲುಪಿತ್ತು. ಬಳಿಕ ಸುಲ್ತಾನ್ ಮತ್ತು ಸಾಹಿದಾಗೆ ಪ್ರೀತಿಯಿಂದ ಹಿಂದೆ ಸರಿಯುವಂತೆ ಆಸಿಫ್ ಎಚ್ಚರಿಕೆ ನೀಡಿದ್ದ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಪ್ರೇಮಿಗಳು ಪ್ರೇಮದಾಟ ಮುಂದುವರಿಸಿರುವಾಗಲೇ ಹುಡುಗಿಗೆ ಬೇರೆ ಕಡೆಯಿಂದ ಮದುವೆ ಸಂಬಂಧ ಬಂದಿತ್ತು, ಇದನ್ನು ಅರಿತ ಪ್ರಿಯತಮೆ ಸಾಹಿದಾ ಮನೆಗೆ ಬಂದು ಮದುವೆ ಪ್ರಸ್ತಾವ ಮುಂದಿಡುವಂತೆ ಸುಲ್ತಾನ್‌ಗೆ ಸೂಚಿಸಿದಳು. ಆ ಪ್ರಕಾರ ಆತ ಮನೆಗೆ ಹೋಗಿ ಮದುವೆ ಪ್ರಸ್ತಾವ ಮಾಡಿದ್ದೇ ಆತನ ಜೀವಕ್ಕೆ ಮುಳುವಾಯಿತು.
ಸಾಕಷ್ಟು ಸ್ಥಿತಿವಂತರಾಗಿರುವ ಹುಡುಗಿ ಕಡೆಯವರ ಮನೆಗೆ ಬಂದು ಒಬ್ಬ ಬಡ ಆಟೋ ಚಾಲಕ ಮದುವೆ ಪ್ರಸ್ತಾಪ ಮಾಡಿದ್ದನ್ನು ಸಹಿಸದ ಹುಡುಗಿಯ ಅಣ್ಣ ಆಸಿಫ್ ಗುರುವಾರ ರಾತ್ರಿ ಸುಲ್ತಾನ್‌ನನ್ನು ಮದುವೆ ಮಾತುಕತೆಗೆಂದು ಕರೆಸಿಕೊಂಡು ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.