ಪೌರ ಕಾರ್ಮಿಕರು ಹಾಗೂ ತುಳಿತಕ್ಕೊಳಗಾಗಿರುವ ದೀನದಲಿತರ ಹಿತಾಸಕ್ತಿಯನ್ನು ಕಡೆಗಣಿಸಿರುವ ರಾಜ್ಯ ಬಿಜೆಪಿ ಸರ್ಕಾರ ಬಿಟ್ಟಿ ಪ್ರಚಾರ ಮಾಡುವವರಿಗೆ, ಬೇರೆ ಪಕ್ಷಗಳನ್ನು ಟೀಕಿಸುವವರಿಗೆ ಹಾಗೂ ತಮಗೆ ಬೇಕಾದ ಮಠ ಮಾನ್ಯರಿಗೆ ಕೋಟಿ ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ಟೀಕಿಸಿದ್ದಾರೆ.
ಬಿಬಿಎಂಪಿ ಪೌರ ಕಾರ್ಮಿಕರ ಸಂಘಗಳ ಸಮಿತಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ನಗರ ಸ್ವಚ್ಛತೆಗಾಗಿ ನಿಷ್ಠೆಯಿಂದ ದುಡಿಯುತ್ತಿದ್ದಾರಾದರೂ ಇಂಥವರ ನೆರವಿಗೆ ಸರ್ಕಾರ ಬರುತ್ತಿಲ್ಲ. ಇದು ಖಂಡನಿಯ ಎಂದು ಅವರು ಹೇಳಿದರು.
ಪೌರ ಕಾರ್ಮಿಕರನ್ನು ನೇರ ನೇಮಕ ಮಾಡಿಕೊಳ್ಳದೆ ಗುತ್ತಿಗೆ ಪದ್ಧತಿಗೆ ಹೆಚ್ಚಿನ ಮನ್ನಣೆ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸ್ವಚ್ಛತಾ ಕಾರ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವ ಪ್ರವೃತ್ತಿಯು ಬಡವರ ಹೊಟ್ಟೆ ಮೇಲೆ ಹೊಡೆದು ಗುತ್ತಿಗೆಗಾರರ ಹೊಟ್ಟೆ ತುಂಬಿಸುವುದಾಗಿದೆ. ಇದನ್ನು ತಪ್ಪಿಸಲೆಂದೇ ಪೌರ ಕಾರ್ಮಿಕರ ಕಲ್ಯಾಣ ಸಮಿತಿಯನ್ನು ನೇಮಿಸಲಾಗಿದೆ. ಈ ಸಮಿತಿ ನೀಡುವ ವರದಿಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸಚಿವ ಸಂಪುಟದಲ್ಲಿ ಒತ್ತಾಯಿಸುವುದಾಗಿ ಖರ್ಗೆ ಭರವಸೆ ನೀಡಿದರು.