ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಡೆಸಿರುವ ವಾಮಾಚಾರಗಳ ಸಂಪೂರ್ಣ ಮಾಹಿತಿಯನ್ನು ಸೋಮವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಮಾವೇಶಕ್ಕಾಗಿ ಶಿವಮೊಗ್ಗದ ಶಿಕಾರಿಪುರಕ್ಕೆ ಬಂದಿದ್ದ ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ವಾಮಾಚಾರ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಈ ವಾಮಾಚಾರ ನಡೆದಿತ್ತು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಸೋಮವಾರ ಬಿಡುಗಡೆ ಮಾಡುತ್ತೇನೆ ಎಂದರು.
ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಆದರೆ ನಾನು ಅಧಿವೇಶನಕ್ಕೆ ಹೋಗುತ್ತಿಲ್ಲ. ಮುಖ್ಯಮಂತ್ರಿಯ ಜಾತಕ ಬಯಲು ಮಾಡುತ್ತೇನೆ ಎಂದು ಗುಡುಗಿದರು. ಆದರೆ ಈ ಮಾಹಿತಿ ಯಾವ ರೂಪದಲ್ಲಿರುತ್ತದೆ ಎಂಬುದನ್ನು ತಿಳಿಸಲು ಅವರು ನಿರಾಕರಿಸಿದರು.
ಬಿಜೆಪಿ ಸರಕಾರವು ಸಾವಿರ ದಿನಗಳನ್ನು ಪೂರೈಸಿರುವುದಕ್ಕೆ ಸಮಾವೇಶ ಆಯೋಜಿಸಿರುವುದನ್ನು ಟೀಕಿಸಿರುವ ಕುಮಾರಸ್ವಾಮಿ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳೇ ಈ ಸರಕಾರದ ಸಾಧನೆ. ಇದನ್ನೇ ಸಮಾವೇಶದಲ್ಲಿ ಬಿಂಬಿಸಲಿದ್ದಾರೆ ಎಂದು ಹೇಳಿದರು.
ಮೈಸೂರು ಸಂಸದ ಎಚ್. ವಿಶ್ವನಾಥ್ ಅವರು ತಮ್ಮನ್ನು ಶಕುನಿ ಎಂದು ಕರೆದಿರುವುದಕ್ಕೂ ಜೆಡಿಎಸ್ ಸಂಸದ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ತಮ್ಮಿಂದಾಗಿಯೇ ವಿಶ್ವನಾಥ್ ಇಂದು ಸಂಸದರಾಗಿದ್ದಾರೆ. ಆದರೆ ಈಗ ಅವರ ಪಾಲಿಗೆ ನಾನು ಶಕುನಿಯಂತೆ ಕಾಣುತ್ತಿದ್ದೇನೆ. ಮುಂದೆ ಶನಿಯಾಗಿ ಕಾಡುತ್ತೇನೆ ಎಂದರು.