ಮುಸುಕಿನ ಗುದ್ದಾಟದ ನಂತರ ಮಾರ್ಚ್ 3ರಂದು ನಡೆಯುವ ರಾಜ್ಯಸಭೆಯ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ನಟಿ ಹೇಮಾಮಾಲಿನಿ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಅವರು 5 ಕೆಜಿ ಚಿನ್ನ ಸೇರಿದಂತೆ ಸುಮಾರು 100 ಕೋಟಿಗೂ ಅಧಿಕ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದಾರೆ.
ಹೇಮಾಮಾಲಿನಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನೀಡಿರುವ ಆಸ್ತಿ ವಿವರದಂತೆ, 80,30,00,000 ಸ್ಥಿರ ಮತ್ತು 31,41,05,732 ಚರ ಆಸ್ತಿ ಸೇರಿದಂತೆ ಒಟ್ಟು 111,71,05,73 ರೂ.ಆಸ್ತಿ ಹೊಂದಿದ್ದಾರೆ. ಇದರಲ್ಲಿ ಪತಿ ಧರ್ಮೇಂದ್ರ ಹೆಸರಿನಲ್ಲಿ ಇರುವ ಆಸ್ತಿಯೂ ಸೇರಿದೆ. ಅಲ್ಲದೇ ಐಡಿಬಿಐ, ಐಸಿಐಸಿಐ ಬ್ಯಾಂಕ್‌ಗಳಲ್ಲಿ 16,83,60,070 ರೂ.ಸಾಲ ಇದೆ.
ಆಸ್ತಿ ವಿವರ: ಬ್ಯಾಂಕ್ ಖಾತೆಗಳಲ್ಲಿ ಠೇವಣಿ 83,74,872 ರೂ. ಬಾಂಡ್, ಷೇರುಗಳ ರೂಪದಲ್ಲಿ 1,98,46,360ರೂ. ಅಂಚೆ ಕಚೇರಿ, ಎನ್‌ಎಸ್‌ಸಿ,ಎಲ್‌ಐಸಿ ಪಾಲಿಸಿ ರೂಪದಲ್ಲಿ ನಾಲ್ಕ ಲಕ್ಷ. ಮರ್ಸಿಡಿಸ್ ಬೆಂಜ್,ಟೊಯೊಟಾ ಇನೊವಾ, ಹುಂಡೈ ಸ್ಯಾಂಟ್ರೋ, ಮಾರುತಿ ಕಾರಿನ ಮೌಲ್ಯ ರೂ.37.19,994 22 ಕ್ಯಾರೆಟ್‌ನ 3779 ಗ್ರಾಂ ಹಾಗೂ 18 ಕ್ಯಾರೆಟ್‌ನ 969.86 ಗ್ರಾಂ ಚಿನ್ನ, 116.860 ಕ್ಯಾರೆಟ್ ಡೈಮಂಡ್ ಹೊಂದಿದ್ದು ಅವುಗಳ ಒಟ್ಟು ಮೌಲ್ಯ 1,39,173,20 ರೂ. ಇತರೆ ಆಸ್ತಿಗಲ ಮೌಲ್ಯ 23,14,663 ರೂ. ಚೆನ್ನೈನ ಅಪಾರ್ಟ್‌ಮೆಂಟ್, ಮನೆ ಮೌಲ್ಯ 4,00,00,000 ರೂ. ಮುಂಬೈ ಅಪಾರ್ಟ್‌ಮೆಂಟ್, ಮನೆ ಮೌಲ್ಯ 1,30,00,000ರೂ. ಮುಂಬೈನ ವಿವಿಧೆಡೆ ಇರುವ ಮನೆ ಮೌಲ್ಯ 30,50,00,000ರೂ.
ರಾಜ್ಯಸಭೆಗೆ ಕರ್ನಾಟಕದಿಂದ ವಿ.ಧನಂಜಯ್ ಕುಮಾರ್ ಅವರನ್ನು ಕಳುಹಿಸಬೇಕೆಂಬ ಇಚ್ಛೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರದ್ದಾಗಿತ್ತು. ಏತನ್ಮಧ್ಯೆ ಬಳ್ಳಾರಿ ಸಚಿವ ತ್ರಯರು ಕೋಳೂರು ಬಸವನಗೌಡ ಅವರನ್ನು ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಒಟ್ಟಾರೆ ರಾಜ್ಯಬಿಜೆಪಿಯಲ್ಲಿನ ಅಪಸ್ವರಗಳ ಗುಟ್ಟನ್ನು ತಿಳಿದ ಬಿಜೆಪಿ ಹೈಕಮಾಂಡ್ ಕೊನೆಗೂ ನಟಿ ಹೇಮಾಮಾಲಿನಿ ಅವರನ್ನು ಕಣಕ್ಕಿಳಿಸಿದೆ.
ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಖ್ಯಾತ ಸಾಹಿತಿ ಡಾ.ಮರುಳಸಿದ್ದಪ್ಪ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಆ ನಿಟ್ಟಿನಲ್ಲಿ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಅವಿರೋಧ ಆಯ್ಕೆಯಾಗುವುದಕ್ಕೆ ತಡೆಯೊಡ್ಡಿದಂತಾಗಿದ್ದು, ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ. ಇಷ್ಟೆಲ್ಲ ಜಿದ್ದಾಜಿದ್ದಿನ ನಡುವೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ. ಯಾಕೆಂದರೆ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರೇ ಹೆಚ್ಚಿನ(ಸ್ಪೀಕರ್ ಸೇರಿ 106) ಸದಸ್ಯರು ಇದ್ದು, ವಿಪಕ್ಷಗಳ ಸಂಖ್ಯೆ 98 ಇದೆ.