ಹಲವು ನಿರೀಕ್ಷೆ; ಪ್ರಥಮ ಕೃಷಿ ಬಜೆಟ್ ಮಂಡನೆಗೆ ಸಿದ್ದವಾದ ಸಿಎಂ
ಬೆಂಗಳೂರು, ಬುಧವಾರ, 23 ಫೆಬ್ರವರಿ 2011( 20:08 IST )
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೇಗಿಲಯೋಗಿಯ ಬದುಕು ಹಸನುಗೊಳಿಸುವ ಮಹತ್ವಾಕಾಂಕ್ಷೆಯ ಪ್ರತ್ಯೇಕ ಕೃಷಿ ಬಜೆಟ್ ಅನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ಅನ್ನದಾತ ಸ್ವಾವಲಂಬಿ ಬದುಕು ಸಾಗಿಸಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ಹತ್ತು ಹಲವು ಭರವಸೆವನ್ನೊಳಗೊಂಡ ಸಾಮಾನ್ಯ ಬಜೆಟ್ ಅನ್ನು ಸಿಎಂ ನಾಳೆ ಮಧ್ಯಾಹ್ನ 12 ಗಂಟೆಗೆ ಮಂಡನೆ ಮಾಡಲಿದ್ದಾರೆ. ಶೇ.1ರ ಬಡ್ಡಿದರದಲ್ಲಿ ರೈತಾಪಿ ವರ್ಗಕ್ಕೆ ಸಾಲ ಸೌಲಭ್ಯ ಸೇರಿದಂತೆ ಹಲವು ಆಶ್ವಾಸನೆಗಳ ಮಹಾಪೂರವೇ ಬಜೆಟ್ ಮೂಲಕ ಹೊರಬೀಳಲಿದೆ.
ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಆರನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ ಸೇರಿದಂತೆ ಹಲವು ಪ್ರಮುಖ ಘೋಷಣೆಗಳನ್ನು ಯಡಿಯೂರಪ್ಪ ಅವರು ಮಂಡಿಸಲಿದ್ದಾರೆ.
ಯಡಿಯೂರಪ್ಪ ಅವರು ಈಗಾಗಲೇ ಘೋಷಣೆ ಮಾಡಿರುವಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಉದ್ಘೋಷಕ್ಕೆ ಪೂರಕವಾದ ಅಂಶಗಳು ಬಜೆಟ್‌ನಲ್ಲಿರಲಿವೆ ಎಂಬ ನಿರೀಕ್ಷೆ ಜನರಲ್ಲಿದೆ. ಎಲ್ಲ ವರ್ಗದವರನ್ನು ಸಂತುಷ್ಟಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಯಡಿಯೂರಪ್ಪ ಪ್ರಕಟಿಸುವ ಸಾಧ್ಯತೆಯಿದೆ.
ಯಡಿಯೂರಪ್ಪ ಅವರ ಆರನೇ ಬಜೆಟ್: ಸತತ ಆರನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಕೀರ್ತಿಗೆ ಯಡಿಯೂರಪ್ಪ ಅವರು ಪಾತ್ರರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ನಾಲ್ಕನೆ ಬಜೆಟ್ ಮಂಡಿಸಿದಂತಾಗಿದೆ. ಅದಕ್ಕೂ ಮುನ್ನ ಅವರು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಎರಡು ಬಜೆಟ್ ಮಂಡನೆ ಮಾಡಿದ್ದರು.