ಎಂಡೋಸಲ್ಫಾನ್ ಕೀಟನಾಶಕ ಬಳಕೆಗೆ ಎರಡು ತಿಂಗಳ ಕಾಲ ನಿಷೇಧ ಹೇರಿರುವ ರಾಜ್ಯ ಸರಕಾರದ ಆದೇಶ ಪ್ರಶ್ನಿಸಿ ಮುಂಬೈ ಮೂಲದ ಇದರ ತಯಾರಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.
ಎಂಡೋಸಲ್ಫಾನ್ ತಯಾರಕರ ಕ್ಷೇಮಾಭಿವೃದ್ಧಿ ಸಂಘ, ಎಕ್ಸೆಲ್ ಕ್ರಾಪ್ ಕೇರ್ ಲಿಮಿಟೆಡ್ ಸೇರಿದಂತೆ ಇನ್ನಿತರರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನಡೆಸುತ್ತಿದ್ದಾರೆ. ಈ ರೀತಿ ನಿಷೇಧ ಹೇರುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಈ ಕೀಟನಾಶಕದ ಬಳಕೆ ಕುರಿತಂತೆ ಸರಕಾರದಿಂದ 2004ರಲ್ಲಿ ರಚನೆಗೊಂಡ ತಜ್ಞರ ಸಮಿತಿ ನೀಡಿರುವ ವರದಿಗೆ ಸರಕಾರದ ಈ ಆದೇಶ ವ್ಯತಿರಿಕ್ತವಾಗಿದೆ. ಆ ನಿಟ್ಟಿನಲ್ಲಿ ಎಂಡೋಸಲ್ಫಾನ್ ಅನ್ನು ದುರುದ್ದೇಶಪೂರ್ವಕವಾಗಿ ನಿಷೇಧಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಎಂಡೋಸಲ್ಫಾನ್ ಬಳಕೆಯಿಂದ ಯಾವ ಸ್ಥಳದಲ್ಲಿ ದುಷ್ಪರಿಣಾಮ ಉಂಟಾಗಿದೆ ಎಂದು ಹೇಳಲಾಗುತ್ತಿದೆಯೋ(ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳು) ಅಲ್ಲಿ ಇದನ್ನು ಬಳಕೆ ಮಾಡುವವರ ಸಂಖ್ಯೆ ಇಡೀ ರಾಜ್ಯಕ್ಕೆ ಹೋಲಿಸಿದರೆ ಶೇ.0.625 ಮಾತ್ರ.
ಆದರೆ ಹಲವು ವರ್ಷಗಳಿಂದ ವಿವಿಧ ಭಾಗಗಳಲ್ಲಿ ಎಂಡೋಸಲ್ಫಾನ್ ಮಾರಾಟ ಮಾಡಲಾಗುತ್ತಿದೆ. ವರ್ಷಕ್ಕೆ ಸುಮಾರು ಎಂಟು ಲಕ್ಷ ಲೀಟರ್ ಮಾರಾಟ ಆಗುತ್ತಿದೆ. ಆದರೆ ಎಲ್ಲಿಯೂ ಇದರ ದುಷ್ಪರಿಣಾಮದ ವರದಿಯಾಗಿಲ್ಲ. ಈಗ ಸರಕಾರ ನಿಷೇಧ ಮಾಡಿರುವುದರಿಂದ ಇದರ ತಯಾರಕರ ಹಕ್ಕನ್ನು ಕಸಿದುಕೊಂಡಂತಾಗಿದೆ. ಇದರಿಂದ ಇದನ್ನು ತಯಾರಿಸುವ ಐದು ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೀದಿ ಪಾಲಾಗಬೇಕಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.