ಹಲವು ಜಿಲ್ಲೆಗಳಿಗೆ ಸೊನ್ನೆ; ಸಿಎಂರದ್ದು ಶಿವಮೊಗ್ಗ ಬಜೆಟ್?
ಬೆಂಗಳೂರು, ಶುಕ್ರವಾರ, 25 ಫೆಬ್ರವರಿ 2011( 10:19 IST )
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ದೇಶದ ಮೊತ್ತ ಮೊದಲ ಕೃಷಿ ಬಜೆಟನ್ನು ಸ್ವಾಗತಿಸುತ್ತಲೇ, ಅವರು ಮಾಡಿರುವ ತಾರತಮ್ಯಗಳನ್ನು ಗಮನಿಸಿದರೆ ಧುತ್ತನೆ ಎದುರಾಗುವುದು ನೂರಾರು ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರುವ ಶಿವಮೊಗ್ಗ ಮತ್ತು ಏನೂ ಪಡೆದುಕೊಳ್ಳದ ಕೆಲವು ಜಿಲ್ಲೆಗಳು!
ಯಾಕೆ ಹೀಗೆಂದು ಯಾರೂ ಪ್ರಶ್ನೆ ಮಾಡುವಂತಿಲ್ಲ. ಎಂದಿನಂತೆ ತನ್ನ ರಾಜಕೀಯ ಎದುರಾಳಿಗಳ ನಾಡು ಹಾಸನಕ್ಕೆ ದೇಗುಲವೊಂದರ ಜೀರ್ಣೋದ್ಧಾರ ಬಿಟ್ಟರೆ ಏನೂ ಇಲ್ಲ. ಕೊಪ್ಪಳ, ಕೋಲಾರ, ಗದಗ, ದಾವಣಗೆರೆ ಮತ್ತು ರಾಯಚೂರು ಜಿಲ್ಲೆಗಳಿಗೆ ನಯಾ ಪೈಸೆ ಯೋಜನೆಗಳನ್ನು ಪ್ರಕಟಿಸಿಲ್ಲ. ಇವಿಷ್ಟೂ ಜಿಲ್ಲೆಗಳು ಮುಖ್ಯಮಂತ್ರಿಯವರ ಅವಕೃಪೆಗೆ ಪಾತ್ರವಾಗಿವೆ.
ಗೌಡರ ಕುಟುಂಬದ ಜೆಡಿಎಸ್ ನಾಯಕರು ಮೊದಲಿನಿಂದಲೂ ಬಿಜೆಪಿ ಸರಕಾರ ಮಾಡುತ್ತಿರುವ ತಾರತಮ್ಯಗಳ ಬಗ್ಗೆ ತಕರಾರು ಎತ್ತುತ್ತಾ ಆರೋಪಗಳನ್ನು ಮಾಡುತ್ತಿದ್ದವರು. ಈಗ ಅದು ನಿಜವಾಗಿದೆ. ಮುಖ್ಯಮಂತ್ರಿಯವರು ದ್ವೇಷ ಸಾಧನೆ ಮಾಡುತ್ತಿದ್ದಾರೆ. ಇಲ್ಲದೇ ಇದ್ದರೆ, ಹಾಸನ ಜಿಲ್ಲೆಗೆ ಕನಿಷ್ಠ ಯೋಜನೆಗಳನ್ನಾದರೂ ಮುಖ್ಯಮಂತ್ರಿ ಪ್ರಕಟಿಸಿರುತ್ತಿದ್ದರು.
ಮುಖ್ಯಮಂತ್ರಿಯವರ ತವರು ಜಿಲ್ಲೆ ಶಿವಮೊಗ್ಗಕ್ಕೆ ಬರೋಬ್ಬರಿ 250 ಕೋಟಿ ರೂಪಾಯಿಗಳ ಎಂಟು ಯೋಜನೆಗಳನ್ನು ಪ್ರಕಟಿಸಲಾಗಿದೆ. ಬಿಜೆಪಿಯ ಪ್ರಬಲ ಬೇರುಗಳನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳೂ ಇದರಿಂದ ಹೊರತಾಗಿಲ್ಲ. ಈ ಎರಡು ಜಿಲ್ಲೆಗಳು ಕನಿಷ್ಠ 10 ಯೋಜನೆಗಳ ಲಾಭ ಪಡೆಯಲಿವೆ.
ಕೆಲವು ಜಿಲ್ಲೆಗಳಿಗೆ ಸಿಕ್ಕಿರುವ ಯೋಜನೆಗಳನ್ನು ಇಲ್ಲಿ ನೀಡಲಾಗಿದೆ.
ಶಿವಮೊಗ್ಗ * 45 ಕೋಟಿ ರೂ. ವೆಚ್ಚದಲ್ಲಿ ಪಶು ಆಹಾರ ತಯಾರಿಕಾ ಘಟಕ. * ಮಲ್ನಾಡ್ ಗಿಡ್ಡ ಆಕಳು ತಳಿ ಅಭಿವೃದ್ಧಿಗೆ ಜಾನುವಾರ ಕ್ಷೇತ್ರ ಸ್ಥಾಪನೆ. * ಸಾಗರದಲ್ಲಿ ಬೆಕ್ಕೋಡಿ ಕಾಲುವೆ ನಿರ್ಮಾಣಕ್ಕೆ 25 ಕೋಟಿ ರೂ. * ಶಿವಮೊಗ್ಗದಲ್ಲಿ ರಿಂಗ್ ರಸ್ತೆಗೆ 100 ಕೋಟಿ. * ಅಂಜನಾಪುರ ಡ್ಯಾಮ್ ರಸ್ತೆ, ಉದ್ಯಾನ ಅಭಿವೃದ್ಧಿಗೆ ಹತ್ತು ಕೋಟಿ. * ಆಯುರ್ವೇದ ಕಾಲೇಜು ಸ್ಥಾಪನೆಗೆ 10 ಕೋಟಿ. * ಶಿವಗಂಗಾ ಯೋಗ ಕೇಂದ್ರಕ್ಕೆ 25 ಕೋಟಿ. * ವಿದ್ಯಾನಗರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ 10 ಕೋಟಿ.
ದಕ್ಷಿಣ ಕನ್ನಡ * ಬಂಟ್ವಾಳ ತಾಲೂಕಿನ ತುಂಬೆ ತೋಟಗಾರಿಕಾ ಫಾರಂನಲ್ಲಿ ನೀರಾ ಸಂಸ್ಕರಣ ಘಟಕ. * ಮಂಗಳೂರಿನಲ್ಲಿ ನೀರು ಮತ್ತು ವಿದ್ಯುತ್ ಬಳಕೆಗೆ ಮಾದರಿ ಯೋಜನೆ. * ಸಣ್ಣ ಬಂದರುಗಳ ಅಭಿವೃದ್ಧಿಗೆ ಯೋಜನೆ. * ಕಿಂಡಿ ಅಣೆಕಟ್ಟು, ಚೆಕ್ ಡ್ಯಾಮ್, ಸೇತುವೆಗಳ ನಿರ್ಮಾಣಕ್ಕೆ ನೆರವು. * ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ 15 ಕೋಟಿ. * ಉಳ್ಳಾಲ ಕಡಲ್ಕೊರೆತ ತಡೆ ಕಾಮಗಾರಿಗೆ 350 ಕೋಟಿ.
ಉಡುಪಿ * ನೀರು ಮತ್ತು ವಿದ್ಯುತ್ ಬಳಕೆ ಮಾದರಿ ಯೋಜನೆ * ಸಣ್ಣ ಬಂದರುಗಳ ಅಭಿವೃದ್ಧಿಗೆ ಯೋಜನೆ * ಕಿಂಡಿ ಅಣೆಕಟ್ಟು, ಚೆಕ್ ಡ್ಯಾಮ್, ಸೇತುವೆ ನಿರ್ಮಾಣಕ್ಕೆ ನೆರವು * ಮರವಂತೆಯಲ್ಲಿ ಕೇರಳ ಮಾದರಿ ಹೊರ ಬಂದರು ನಿರ್ಮಾಣಕ್ಕೆ 45 ಕೋಟಿ.
ಕೊಡಗು * ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ. * ಕುಶಾಲನಗರದಲ್ಲಿ ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ 5 ಕೋಟಿ. * ವಿರಾಜಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 5 ಕೋಟಿ. * ಅರಮೇರಿ ಕಳಂಚೇರಿ ಮಠದ ಅಭಿವೃದ್ಧಿಗೆ ಒಂದು ಕೋಟಿ.
ಹಾಸನ * ಹಾಸನಾಂಬ ಮತ್ತು ಸಿದ್ಧೇಶ್ವರ ದೇಗುಲಗಳ ಜೀರ್ಣೋದ್ಧಾರಕ್ಕೆ 2 ಕೋಟಿ ರೂ.
ಏನೂ ಇಲ್ಲದ ಜಿಲ್ಲೆಗಳು * ಗದಗ * ಕೋಲಾರ * ದಾವಣಗೆರೆ * ಕೊಪ್ಪಳ * ರಾಯಚೂರು